ಮಂಗಳೂರು, ಅ.13(SS): ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಮಾಣಿಕ ತನಿಖೆ ನಡೆಸಲು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭರತ್ ಶೆಟ್ಟಿಯವರಿಗೆ ಮನವಿ ನೀಡಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷ 23 ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣ ರಾಷ್ಟ್ರವ್ಯಾಪಿ ಸುದ್ಧಿಯಾಗಿತ್ತು. ಕಾಂಗ್ರೆಸ್ ಸರ್ಕಾರ ಈ ಭೀಕರ ಹತ್ಯೆಗಳ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸುವುದರಲ್ಲಿ ಮತ್ತು ತಪ್ಪಿತಸ್ತರಿಗೆ ಸೂಕ್ತ ಶಿಕ್ಷೆ ಕೊಡಿಸುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರವು ಈ ಪ್ರಕರಣದಲ್ಲಿ ಅರೋಪಿಗಳಿಗೆ ಪರವಾಗಿ ನಡೆದುಕೊಳ್ಳುವ ಮೂಲಕ ಅಪರಾಧಿಗಳಿಗೆ ಜಾಮೀನು ಸಿಗುವ ಹಾಗೆ, ಅವರು ಬಿಡುಗಡೆಯಾಗುವ ಹಾಗೆ ನಡೆದುಕೊಂಡಿರುವುದು ದುರದೃಷ್ಠಕರವಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಮೈಸೂರು ಜಿಲ್ಲೆಯಲ್ಲಿ 8 ಹತ್ಯೆಗಳು ನಡೆದಿದ್ದು, ಅದರಲ್ಲಿ 6 ಹತ್ಯೆಗಳು ಧಾರ್ಮಿಕ ಕಾರಣಗಳನ್ನು ಹೊಂದಿದ್ದವು. ಮುಸ್ಲಿಂ ಯುವತಿಯ ಜೊತೆ ಆತ್ಮೀಯತೆ ಬೆಳಸಿದ ಕಾರಣಕ್ಕೆ ತ್ಯಾಗರಾಜ ಪಿಳೈ ಹತ್ಯೆಯಾಯಿತು. ಈ ಹತ್ಯೆಯ ಆರೋಪಿಗಳು ಎಲ್ಲರೂ ಬಿಡುಗಡೆಯಾಗಿದ್ದಾರೆ. 2009 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕರಾದ ಹರೀಶ್ ಮತ್ತು ಅವನ ಸಹೋದರ ಸತೀಶ ಮೇಲೆ ಹಲ್ಲೆ ನಡೆದಿತ್ತು. ಅದರಲ್ಲಿ ಹರೀಶ್ ಅವರು ಸಾವನ್ನಪ್ಪಿದ್ದಾರೆ. ಈ ಮೇಲಿನ ಯಾವುದೇ ಪ್ರಕರಣದಲ್ಲಿ ಪೋಲಿಸರು ಸೂಕ್ತ ತನಿಖೆಯನ್ನು ಮಾಡಿಲ್ಲ ಮತ್ತು ಪೋಲಿಸರು ತಮ್ಮ ಅನುಕೂಲಕ್ಕೆ ತಕ್ಕಂತೆ ವರದಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮೈಸೂರಿನ ಕೆ. ರಾಜುರವರ ಹತ್ಯೆಯ ತನಿಖೆಯನ್ನು ಮಾಡುವಾಗ ಉಳಿದ ಹತ್ಯೆಗಳ ಪ್ರಕರಣವನ್ನು ಪೋಲಿಸರು ಭೇದಿಸಿದ್ದಾರೆ. ಪೋಲಿಸರು ಜಾಣತನದಿಂದ ಪ್ರಾರಂಭದಲ್ಲಿ ಕಾನೂನು ಬಾಹಿರ ತಡೆ ಕಾಯಿದೆಯನ್ನು ಕೆಲವು ಹತ್ಯೆಗಳ ಪ್ರಕರಣದಲ್ಲಿ ಹಾಕಿದರೂ ಸಹ, ಆರೋಪಿಗಳಿಗೆ ಜಾಮೀನು ಸಿಗಲು ಯಾವುದೇ ವಿರೋಧ ಮಾಡಲಿಲ್ಲ. ಈ ಕಾಯಿದೆಯ ಕಾಲಂಗಳನ್ನು ಪೋಲಿಸರು ಯೋಗ್ಯ ರೀತಿಯಲ್ಲಿ ಉಪಯೋಗಿಸಿ ಆರೋಪಿಗಳಿಗೆ ಶಿಕ್ಷೆಯಾಗುವ ಹಾಗೆ ಪ್ರಯತ್ನ ಮಾಡಿರಲಿಲ್ಲ. ಆರೋಪ ಪತ್ರವನ್ನು ಸಲ್ಲಿಸುವಾಗ ಕಾನೂನು ಬಾಹಿರ ಕಾಯಿದೆಯನ್ನು ಪೋಲಿಸರು ತೆಗೆದಿದ್ದಾರೆ ಎಂದು ಮನವಿಯಲ್ಲಿ ಹೇಳಿದ್ದಾರೆ.
ಅಪರಾಧಿಗಳ ಗುಂಪು ಅನೇಕ ಹಿಂದೂ ನೇತಾರರ ಹತ್ಯೆ, ವಿದ್ಯಾರ್ಥಿಗಳ ಅಪಹರಣ, ಸುಲಿಗೆ, ದಂಗೆ ಮುಂತಾದ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಸಹ, ಇವರಿಗೆ ಜಾಮೀನು ನೀಡಲಾಗಿದೆ ಮತ್ತು ಕೆಲವರಿಗೆ ಬಿಡುಗಡೆಯಾಗಿದೆ. ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನೀಡುವಾಗ ಸಾಕ್ಷಿಗಳ ಕೊರತೆಯ ಕಾರಣಗಳನ್ನು ಹೇಳುತ್ತಿದೆ. ಒಟ್ಟಾರೆ ಈ ಪ್ರಕರಣದಲ್ಲಿ ಪೋಲಿಸರು ಸರಿಯಾಗಿ ತನಿಖೆಯನ್ನು ಮಾಡಿಲ್ಲ. ತನಿಖೆಯಲ್ಲಿ ಸವೋಚ್ಚ ನ್ಯಾಯಾಲಯದ ಮಾರ್ಗದರ್ಶಕ ಸೂತ್ರಗಳನ್ನು ಸರಿಯಾಗಿ ಅನುಷ್ಠಾನ ಮಾಡದ ತನಿಕಾಧಿಕಾರಿಗಳ ವಿರುದ್ಧ ತನಿಖೆಯಾಗಬೇಕು ಮತ್ತು ವಿಧಾನಸಭೆಯಲ್ಲಿ ಪ್ರಸ್ತಾಪಿಸಬೇಕೆಂದು ಶಾಸಕರಲ್ಲಿ ವಿನಂತಿಸಿ ಮನವಿ ನೀಡಿದ್ದಾರೆ.
ಈ ಸಂದರ್ಭ ಹಿಂದೂ ಜನಜಾಗೃತಿ ಸಮಿತಿಯ ಲೋಕೇಶ್ ಕುತ್ತಾರ್,. ಉಪೇಂದ್ರ ಆಚಾರ್ಯ, ಉಮೇಶ್ ಆಚಾರ್ಯ, ಕೃಷ್ಣ, ಶ್ರೀ. ರಾಜೇಶ್, ಶ್ರೀ ಶಶಿಧರ್ ಬಾಳಿಗಾ, ಯಮನಪ್ಪ ಭಜಂತ್ರಿ, ಪ್ರಭಾಕರ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.