ಮಂಗಳೂರು, ಜು. 09 (DaijiworldNews/SM): ಕೊರೋನಾ ಸೊಂಕು ಜಗತಿಕವಾಗಿ ವಕ್ಕರಿಸಿದ ದಿನದಿಂದಲೂ ಆರೋಗ್ಯ ಕಾರ್ಯಕರ್ತರ ಸೇವೆ ನಿತ್ಯ ನಿರಂತರ ಎನ್ನುವ ರೀತಿಯಲ್ಲಿ ಮುಂದುವರೆದಿದೆ. ಸ್ವತಃ ಸೋಂಕು ವಕ್ಕರಿಸಿದ್ರೂ ಜನ ಸೇವೆ ಮಾತ್ರ ನಿಲ್ಲಲಿಲ್ಲ. ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ನಿಸ್ವಾರ್ಥ ಸೇವೆಯಲ್ಲಿ ಆರೋಗ್ಯ ಸೇವಕರು ತೊಡಗಿಸಿಕೊಂಡಿದ್ದಾರೆ. ಮನೆ ಬಾಗಿಲ ತನಕ ಆರೋಗ್ಯ ಸೇವೆ ನೀಡಲಾಗುತ್ತಿದೆ. ಮನೆ ಬಾಗಿಲಿಗೆ ಬಂದು ಕೋವಿಡ್ ಪರೀಕ್ಷೆಗೆ ವಿನಂತಿಸಿಕೊಂಡಾಗ ಅನೇಕರು ಆರೋಗ್ಯ ಕಾರ್ಯಕರ್ತರನ್ನು ಟೀಕಿಸುವ ಕಾರ್ಯ ಮಾಡುತ್ತಾರೆ.. ಆದರೆ, ಸ್ವಸ್ಥ್ಯ ಸಮಾಜಕ್ಕಾಗಿ ಆರೋಗ್ಯ ಸೇವಕರು ಶ್ರಮಿಸುತ್ತಿದ್ದಾರೆ ಅನ್ನೋದಕ್ಕೆ ಮತ್ತೊಂದು ನಿದರ್ಶನ ಇಲ್ಲಿದೆ.
ಮಂಗಳೂರು ಹ್ಪ್ರ ವಲಯದ ಬೋಂದೆಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಆರೋಗ್ಯ ಕ್ಷೇತ್ರದಲ್ಲಿ ಮಾದರಿ ಸೇವೆ ನೀಡುತ್ತಿದ್ದಾರೆ. ಕಾಲ್ನಡಿಗೆ ಮೂಲಕ ಮರವೂರು, ಕೆಂಜಾರು, ಮೂಡುಶೆಡ್ಡೆ ಗ್ರಾಮಗಳಿಗೆ ತೆರಳಿ ಜನರ ಆರೋಗ್ಯ ಸೇವೆ ಮಾಡುವ ಮಹಾನ್ ಸೇವಕರೆಣಿಸಿಕೊಂಡಿದ್ದಾರೆ. ಇತ್ತೀಚಿಗೆ ಮರವೂರು ಸಂಪರ್ಕ ಸೇತುವೆ ಕುಸಿದಿರುವ ಹಿನ್ನೆಲೆಯಲ್ಲಿ ಸುತ್ತು ಬಳಸಿ ಪ್ರಯಾಣಿಸಲಾಗದ ಕಾರಣದಿಂದಾಗಿ ಕಾಲ್ನಡಿಗೆ ಮೂಲಕವೇ ನೂರಾರು ಕಿಲೋ ಮೀಟರ್ ನಡೆದುಕೊಂಡು ಗ್ರಾಮದ ಜನರ ಆರೋಗ್ಯ ಕಾಪಾಡುತ್ತಿದ್ದಾರೆ.
ಸುತ್ತು ಬಳಸಿ ವಾಹನಗಳಲ್ಲಿ ಪ್ರಯಾಣಿಸಿದ್ದಲ್ಲಿ ಸಮಯಕ್ಕೆ ಸರಿಯಾಗಿ ಜನರ ಬಳಿಗೆ ತಲುಪಲು ಅಸಾಧ್ಯವಾಗಿದೆ. ಈ ಕಾರಣದಿಂದಾಗಿ ಅನೇಕ ಮಂದಿ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಾರೆ. ಈ ಕಾರಣದಿಂದಾಗಿ ಬೋಂದೆಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಿಬ್ಬಂದಿಗಳು, ಕುಸಿದ ಸೇತುವೆಯ ಮೂಲಕ ಕಾಲ್ನಡಿಗೆಯಲ್ಲಿ ಪ್ರಯಾಣಿಸುವ ಅನಿವಾರ್ಯತೆ ಬಂದೊದಗಿದೆ. ಸೇತುವೆಯ ಒಂದು ಭಾಗದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಕಾಲ್ನಡಿಗೆ ಮೂಲಕ ಸೇತುವೆ ದಾಟಿ ಮರವೂರು ಕೆಂಜಾರು ಪ್ರದೇಶಗಳಲ್ಲಿ ಜನರಿಗೆ ಲಸಿಕೆ ಪೂರೈಕೆ ನೀಡುತ್ತಿದ್ದಾರೆ. ಅಲ್ಲಿ ಕೋವಿಡ್ ತಪಾಸಣೆ ಮಾಡುತ್ತಾ ಮನೆ ಮನೆ ಭೇಟಿ ಕಾರ್ಯ ಮಾಡುತ್ತಾರೆ ಎನ್ನುತ್ತಾರೆ ಬೊಂದೇಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸವಿತಾ.
ಬೋಂದೆಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು ೧೭ ಸಾವಿರಕ್ಕೂ ಅಧಿಕ ಮಂದಿ ವಾಸವಿದ್ದು ನಾಲ್ಕು ಗ್ರಾಮಗಳು ಈ ಕೇಂದ್ರದಡಿಯಲ್ಲಿದೆ. ಈ ಎಲ್ಲಾ ಗ್ರಾಮದಲ್ಲೂ ಕೋವಿಡ್ ಟಾಸ್ಕ್ ಫೋರ್ಸ್ ರಚನೆಯ ಮೂಲಕ ತಮ್ಮ ಗ್ರಾಮದಲ್ಲಿ ಕೋವಿಡ್ ನಿಂದ ಯಾವುದೇ ಸಾವು ಸಂಭವಿಸದಂತೆ ಜಾಗೃತರಾಗಿರುವಂತೆ ಕರೆ ನೀಡಲಾಗಿದೆ. ಅಲ್ಲದೇ ಗ್ರಾಮ ಪಂಚಾಯತ್ ಸದಸ್ಯರು, ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಿಗರು, ಅಧ್ಯಕ್ಷರ ನೆರವು ಮತ್ತು ಗ್ರಾಮದ ಜನರ ಸಹಕಾರದಿಂದಾಗಿ ರಿಂಗ್ ಸರ್ವೆ ಮೂಲಕ ನಿತ್ಯ ೧೦೦ ಕ್ಕೂ ಅಧಿಕ ಕೋವಿಡ್ ತಪಾಸಣೆ ನಡೆಸುತ್ತಿದ್ದಾರೆ. ಇದೀಗ ಬೊಂದೇಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದಂಕಿಗೆ ಇಳಿಕೆಯಾಗಿದ್ದು, ಕೋವಿಡ್ ಮುಕ್ತ ಗ್ರಾಮವನ್ನಾಗಿಸುವುದೇ ಉದ್ದೇಶ.
ನಗರ ಭಾಗದಲ್ಲಿದ್ದುಕೊಂಡು ಗ್ರಾಮೀಣ ಪ್ರದೇಶಗಳ ಜನರಿಗಾಗಿ ಹಾಗೂ ಕೋವಿಡ್ ಮುಕ್ತ ಪರಿಸರ ನಿರ್ಮಾಣದ ಗುರಿಯೊಂದಿಗೆ ಸಹಸಪಟ್ಟು ಜನ ಸೇವೆ ನೀಡುತ್ತಿರುವ ಬೋಂದೆಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ನಮ್ಮದೊಂದು ಸಲಾಂ.