ಮಂಗಳೂರು, ಅ12(SS): ‘ ಓಕೊನುಲಾ ಗಣಪಾ ಓಕೊನುಲಾ’ ತುಳು ಭಕ್ತಿಗೀತೆ ಸಿಡಿ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಜರುಗಿತು.
ಸಿಡಿ ಬಿಡುಗಡೆ ಬಳಿಕ ರಾಮ್ಕುಮಾರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ತುಳು ಚಲನಚಿತ್ರ ರಂಗದ ಹಿರಿಯ ನಟ ಸದಾಶಿವ ಅಮೀನ್, ದೂರದ ಇಸ್ರೇಲ್ನಲ್ಲಿದ್ದರೂ ತಾಯಿ ಭಾಷೆ ತುಳುವಿನ ಅಭಿಮಾನದ ಮೇಲೆ ರಾಮ್ಕುಮಾರ್ ಅವರು ಧ್ವನಿ ಧ್ವನಿತಟ್ಟೆ ಹೊರ ತಂದಿರುವುದು ಸಂಗೀತ ಪ್ರೇಮಿಗಳಿಗೆ ಹರ್ಷ ಮೂಡಿಸಿದೆ. ಈಗಾಗಲೇ ವಿವಿಧ ಭಾಷೆಗಳಲ್ಲಿ ಹಾಡುವ ಮೂಲಕ ಜನಪ್ರಿಯರಾಗಿರುವ ರಾಮ್ ಕುಮಾರ್ ಅಮೀನ್ ಅವರ ಸಂಗೀತ ಪ್ರೀತಿ ಅದ್ಬುತ. ಅವರಿಂದ ಮೂಡಿಬಂದ ಉತ್ತಮ ಸಾಹಿತ್ಯ ಹಾಗೂ ಗಾಯನದ ಅಮ್ಮಾ ಎನ್ನ ದೇವೆರ್ ಹಾಡು ವೈರಲ್ ಆಗಿದೆ. ಈ ಹಾಡು ಕೂಡಾ ಸಂಗೀತ ಪ್ರೇಮಿಗಳ ಮನ ಗೆಲ್ಲಲಿ ಎಂದು ಶುಭ ಹಾರೈಸುವುದಾಗಿ ನುಡಿದರು.
ಗಾಯಕ ಪ್ರಕಾಶ್ ಮಹದೇವನ್ ಮಾತನಾಡಿ ಅನುಗ್ರಹ ಫಿಲಂಸ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಓಕೊನುಲಾ ಗಣಪ ಓಕೊನುಲಾ’ ಎನ್ನುವ ಭಕ್ತಿಗೀತೆ ಸಿಡಿಯಲ್ಲಿ ಒಟ್ಟು ೧೨ ಹಾಡುಗಳಿವೆ. ಮಂಗಳೂರಿನ ರಾಮ್ ಗುಂಡಳಿಕೆ ತಮ್ಮ ಇಸ್ರೇಲ್ನ ಗೆಳೆಯರ ಸಹಕಾರದೊಂದಿಗೆ ನಿರ್ಮಿಸಿದ್ದು, ಸಾಹಿತ್ಯ ಮತ್ತು ರಾಗ ಸಂಯೋಜನೆಯನ್ನು ಅವರೇ ಮಾಡಿದ್ದಾರೆ. ಇದು ರಾಮ್ ಕುಮಾರ್ ಅವರ ಮೂರನೇ ಭಕ್ತಿಗೀತೆ ಸಿಡಿಯಾಗಿದ್ದು, ಭಕ್ತಿದ ಮುತ್ತು ಮತ್ತು ಹೊಸಬೆಳಕು ಈಗಾಗಲೇ ಜನಪ್ರಿಯವಾಗಿದೆ. ಹಾಡಿಗೆ ಖ್ಯಾತ ಗಾಯಕರು ಧ್ವನಿ ನೀಡಿದ್ದಾರೆ ಎಂದರು.
ಸಿಡಿ ಬಿಡುಗಡೆ ಸಮಾರಂಭದಲ್ಲಿ ದಗಲ್ಬಾಜಿ ಚಿತ್ರದ ನಿರ್ಮಾಪಕ ಸಂತೋಷ್ ಶೆಟ್ಟಿ ಕುಂಬ್ಳೆ, ಸಂಗೀತ ನಿರ್ದೇಶಕ ಧನಂಜಯ ವರ್ಮಾ, ಸಂದೇಶ್ ಬಾಬು, ರಾಮ್ಕುಮಾರ್ ಪತ್ನಿ ಶ್ವೇತಾ ರಾಮ್ ಕುಮಾರ್ ಮೊದಲಾದವರಿದ್ದರು.