ವಿಟ್ಲ, ಅ12(SS): ಶಬರಿಮಲೆಗೆ ಮಹಿಳೆಯರ ಪ್ರವೇಶ ತೀರ್ಪನ್ನು ಮರುಪರಿಶೀಲಿಸುವಂತೆ ಹಾಗೂ ಕೇರಳದ ಸರ್ಕಾರದ ವಿರುದ್ಧ ವಿಟ್ಲದ ಶಬರಿಮಲೆ ಉಳಿಸಿ, ಪಾವಿತ್ರ್ಯತೆ ರಕ್ಷಿಸಿ ಸಮಿತಿ ವತಿಯಿಂದ ಮೌನ ಮೆರವಣಿಗೆ ನಡೆದಿದೆ.
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವುದನ್ನು ವಿರೋಧಿಸಿ ದೇಶಾದ್ಯಂತ ಭಕ್ತರು ಪ್ರತಿಭಟನೆ ನಡೆಸುತ್ತಿದ್ದು, ಈ ಮಧ್ಯೆ ಕೇರಳದ ಎಲ್ ಡಿಎಫ್ ಸರ್ಕಾರ ಸುಪ್ರೀಂ ಕೋರ್ಟ್ ಆದೇಶಕ್ಕೆ ಮರು ಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿದ ನಂತರ ಪ್ರತಿಭಟನೆ ತೀವ್ರವಾಗಿದೆ.
ವಿಟ್ಲದ ಜೈನ ಬಸದಿಯಿಂದ ಅಯ್ಯಪ್ಪ ಸ್ವಾಮೀಯ ಘೋಷಣೆಗಳ ಮೂಲಕ ಹೊರಟ ಮೆರವಣಿಗೆ ವಿಟ್ಲ ಮುಖ್ಯ ರಸ್ತೆಯಲ್ಲಿ ಸಂಚರಿಸಿ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದೆ. ಬಳಿಕ ದೇವಸ್ಥಾನದ ವಠಾರದಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರವಾಗಿ ಸಭೆ ನಡೆಸಲಾಗಿದೆ.
ಈ ಮಧ್ಯೆ, ಸಾವಿರಾರು ವರ್ಷಗಳಿಂದ ಬಂದ ಸಂಪ್ರದಾಯವನ್ನು ಮುರಿಯಬಾರದು ಎಂದು ಅಯ್ಯಪ್ಪ ದೇವರ ಭಕ್ತರು ಕೇಳಿಕೊಂಡಿದ್ದಾರೆ. ಕೇರಳ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ, ಕೊಂಡೆಯೂರು ಯೋಗಾನಂದ ಸ್ವಾಮೀಜಿ, ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ, ಬಾಳೆಕೋಡಿ ಕ್ಷೇತ್ರದ ಶಶಿಕಾಂತ ಮಣಿ ಸ್ವಾಮೀಜಿ, ಕಣಿಯೂರು ಕ್ಷೇತ್ರದ ಮಹಾಬಲ ಸ್ವಾಮೀಜಿ ಭಾಗವಹಿಸಿದ್ದಾರೆ.