ಮಂಗಳೂರು, ಅ12(SS): ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಗೆ ಭೇಟಿ ನೀಡುವ ನೆಪದಲ್ಲಿ ಗಾಂಜಾ ಪೂರೈಕೆ ಮಾಡುತ್ತಿದ್ದ ಯುವತಿಯೊಬ್ಬಳನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಬರ್ಕೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅ.11ರಂದು ಮಂಗಳೂರು ಜೈಲ್ ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಖೈದಿಗಳನ್ನು ಭೇಟಿ ನೀಡುವ ಸಮಯದಲ್ಲಿ ಅಕ್ರಮವಾಗಿ ನಿಷೇಧಿತ ವಸ್ತುವಾದ ಗಾಂಜಾವನ್ನು ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಕಾರಾಗೃಹದಲ್ಲಿ ವಿಚಾರಣಾಧೀಣ ಖೈದಿಯಾಗಿದ್ದ ಮುಸ್ತಾಫ ಎಂಬಾತನಿಗೆ ಗಾಂಜಾವನ್ನು ಪೂರೈಕೆ ಮಾಡುತ್ತಿದ್ದ ಯುವತಿಯನ್ನು ವಶಕ್ಕೆ ಪಡೆದುಕೊಂಡು ಆಕೆಯಿಂದ 20 ಗ್ರಾಂ ಗಾಂಜಾ ಹಾಗೂ ಒಂದು ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಯುವತಿಗೆ ಗಾಂಜಾವನ್ನು ನೀಡಿದ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ತನಿಖೆ ಮುಂದುವರಿದಿದೆ.
ಸಿಸಿಬಿ ಘಟಕದ ಇನ್ಸ್ಪೆಕ್ಟರ್ ಶಾಂತಾರಾಮ, ಪಿಎಸ್ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಮತ್ತು ಬರ್ಕೆ ಪೊಲೀಸ್ ಠಾಣಾ ಪಿಎಸ್ಐ ಶೋಭಾ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.