ಮಂಗಳೂರು, ಅ12(SS): ಅಕ್ರಮಗಳ ಆರೋಪ ಹೊಂದಿರುವ ಕಸಾಯಿಖಾನೆಗೆ ಸ್ಮಾರ್ಟ್ ಸಿಟಿಯ 15 ಕೋಟಿ ರೂಪಾಯಿ ಅನುದಾನವನ್ನು ನೀಡಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ವಿವಾದ ಸೃಷ್ಠಿಸಿದ್ದಾರೆ ಅನ್ನುವ ಆರೋಪ ಕೇಳಿ ಬರುತ್ತಿದೆ.
ಈ ಹಿನ್ನೆಲೆಯಲ್ಲಿ, ವಸತಿ ಸಚಿವ ಯು.ಟಿ ಖಾದರ್ ಕ್ರಮವನ್ನು ಖಂಡಿಸಿ ಮಂಗಳೂರಿನಲ್ಲಿ ವಿಶ್ವಹಿಂದು ಪರಿಷತ್, ಭಜರಂಗದಳ ಮತ್ತಿತರ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶರಣ್ ಪಂಪ್ವೆಲ್, ಮಂಗಳೂರಿನ ಕಸಾಯಿಖಾನೆಯಲ್ಲಿ ಅಕ್ರಮವಾಗಿ ದನಗಳನ್ನು ವಧೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕದ್ದ ದನಗಳನ್ನೆಲ್ಲಾ ಕುದ್ರೋಳಿ ಕಸಾಯಿಖಾನೆಯಲ್ಲಿ ವಧೆ ಮಾಡಲಾಗುತ್ತದೆ. ಈಗ ಅದೇ ಕಸಾಯಿಖಾನೆಯ ಅಭಿವೃದ್ಧಿಗೆ ಸಚಿವ ಯುಟಿ ಖಾದರ್ 15 ಕೋಟಿ ರೂಪಾಯಿ ಅನುದಾನ ನೀಡಿದ್ದು ಅನುಮಾನ ಸೃಷ್ಠಿಸಿದೆ. ಒಂದೆಡೆ ಗೋಶಾಲೆಗಳಿಗೆ ಅನುದಾನ ಇನ್ನೂ ಮಂಜೂರಾಗಿಲ್ಲ. ಸರ್ಕಾರ ಮುಂದೆ ಕೈಯೊಡ್ಡುವ ಸ್ಥಿತಿ ಜಿಲ್ಲೆಯ ಕೆಲ ಗೋಶಾಲೆಗಳಿಗಿದೆ. ಈ ನಡುವೆ ಯುಟಿ ಖಾದರ್ ಕಸಾಯಿಖಾನೆಗೆ ಅನುದಾನ ನೀಡಿ ಹಿಂದೂಗಳ ಭಾವನೆಗಳಿಗೆ ನೋವು ಮಾಡಿದ್ದಾರೆ ಎಂದು ಹೇಳಿದರು.
ಯುಟಿ ಖಾದರ್ ಒಂದೇ ಕಸಾಯಿಖಾನೆ ಗೆ 15 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಕಸಾಯಿಖಾನೆ ಅಭಿವೃದ್ಧಿ ಗೆ 15 ಕೋಟಿ ರೂಪಾಯಿ ಅನುದಾನ ನೀಡಿರುವ ಖಾದರ್, ಜನರು ತಿನ್ನುವ ಆಹಾರ ಶುಚಿಯಾಗಿರಬೇಕೆಂದು ಹಣ ನೀಡಿದ್ದೇನೆ ಅಂತಾ ಹೇಳಿಕೆ ಹೇಳಿದ್ದಾರೆ. ಇದು ಹಿಂದೂಗಳ ಮನಸ್ಸಿಗೆ ನೋವು ಉಂಟುಮಾಡಿದೆ. ಹಿಂದೂ ದೇವಾಲಯಗಳ ಒಳಗೆ ಬರಲು ಯುಟಿ ಖಾದರ್ ಅವರಿಗೆ ಅನುಮತಿ ನೀಡಬೇಡಿ. ಕೇವಲ ತೋರಿಕೆಗೆ ಕ್ಷೇತ್ರಗಳಿಗೆ ಭೇಟಿ ನೀಡಿ ಮನ ಒಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ದಯವಿಟ್ಟು ಕ್ಷೇತ್ರಗಳನ್ನು ಪ್ರವೇಶಿಸಲು ಖಾದರ್ ಅವರಿಗೆ ಬಿಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.
ಉಳ್ಳಾಲದಲ್ಲಿಯೂ ಅನೇಕ ಕಸಾಯಿಖಾನೆಗಳಿದೆ. ಅಕ್ರಮ ಕಸಾಯಿಖಾನೆಗಳ ಬಗ್ಗೆ ಇಲ್ಲಿ ಯಾರೂ ಹೇಳೋರು ಕೇಳೋರು ಇಲ್ಲ ಅನ್ನುವಂತಾಗಿದೆ. ಕೇವಲ ಅವರ ಸಮುದಾಯಕ್ಕೆ ಯುಟಿ ಖಾದರ್ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಹಿಂದೂಗಳ ಮತ್ತು ಹಿಂದೂ ಧರ್ಮದ ವಿರುದ್ಧ ಖಾದರ್ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಮೂಲಕ ಹಿಂದೂ ಭಾವನೆಗಳ ವಿರುದ್ಧ ಖಾದರ್ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಹಿಂದೂ ಸಂಘಟನೆಯ ಮುಖಂಡ ಜಗದೀಶ್ ಶೇಣವ, ಸಚಿವ ಯು ಟಿ ಖಾದರ್ ಅವರ ಅಲ್ಪಸಂಖ್ಯಾತರ ಓಲೈಕೆಯನ್ನು ಖಂಡಿಸಿದರು. ಕರ್ನಾಟಕದಲ್ಲಿ ಸಂಫೂರ್ಣ ಗೋಹತ್ಯೆ ನಿಷೇಧ ಇದ್ದರೂ, ಕುದ್ರೋಳಿ ಕಸಾಯಿಖಾನೆಗೆ ವಾಹನದ ಮುಖಾಂತರ ಗೋವಧೆಗಾಗಿ ಗೋಸಾಗಾಟ ಮಾಡಿದ ಹಲವಾರು ಪ್ರಕರಣಗಳು ದಾಖಲಾಗಿದೆ. ಸಚಿವರು ಅಕ್ರಮ ಕಸಾಯಿಖಾನೆಗೆ ಕುಮ್ಮಕ್ಕು ನೀಡುವ ಮೂಲಕ ಇಲ್ಲಿ ಕೋಮುಗಲಭೆ ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ. ಹಿಂದೂಗಳ ಭಾವನೆ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.