ಮಂಗಳೂರು, ಅ 12 (MSP): ತನ್ನ ವಿಭಿನ್ನ ಮ್ಯಾನರಿಸಂ ನಿಂದ ಎಲ್ಲರನ್ನೂ ಹೊಟ್ಟೆ ತುಂಬಾ ನಗಿಸುತ್ತಿದ್ದ ನಟ ವಿಸ್ಮಯ ವಿನಾಯಕ ರಡ್ಡ್ ಎಕ್ರೆ ಲ್ಯಾಂಡ್ ಡೀಲ್ ಗೆ ಹೊರಟಿದ್ದಾರೆ. ಅರೆ..! ಯಾಕೆ ಅವರಿಗೆ ಸಿನಿಮಾ ಬಗ್ಗೆ ವೈರಾಗ್ಯ ಬಂತೆ..? ಹೆಚ್ಚೇನೂ ತಲೆಕೆಡಿಸಿಕೊಳ್ಳಬೇಡಿ ’ರಡ್ಡ್ ಎಕ್ರೆ ’ ಅನ್ನೋದು ಸಿನಿಮಾ ಹೆಸರಷ್ಟೇ.. ಪತ್ತೀಸ್ ಗ್ಯಾಂಗ್ ನಲ್ಲಿ ಮೋಡಿ ಮಾಡಿದ್ದ ನಟ ವಿಸ್ಮಯ್ ವಿನಾಯಕ್ ರಡ್ಡ್ ಎಕ್ರೆ ಮೂಲಕ ನಿರ್ದೇಶನಕ್ಕೆ ಇಳಿದಿದ್ದಾರೆ..ರಂಗ್ ಸಿನಿಮಾ ಬಳಿಕ ವಿನಾಯಕ್ ಅವರ ಎರಡನೇ ನಿರ್ದೇಶನದ ಸಿನಿಮಾವೇ ’ರಡ್ಡ್ ಎಕ್ರೆ’.
ಅ. 15 ರ ಸೋಮವಾರ ಮಂಗಳೂರಿನ ಚಿಲಿಂಬಿ ಸಾಯಿಬಾಬಾ ಮಂದಿರವೊಂದರಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದ್ದು, 25 ದಿನಗಳ ಒಳಗೆ ಚಿತ್ರದ ಚಿತ್ರೀಕರಣ ಮುಗಿಸಬೇಕೆಂದು ಪಕ್ಕಾ ಪ್ಲಾನ್ ಹಾಕಿಕೊಂಡಿದೆ ವಿಸ್ಮಯ್ ವಿನಾಯಕ್ ಮತ್ತವರ ತಂಡ. ರಡ್ದ್ ಎಕ್ರೆ - ನಾಟ್ ಫಾರ್ ಸೇಲ್ ಎನ್ನುವ ಸಬ್ ಟೈಟಲ್ ಇರುವ ಸಿನಿಮಾದಲ್ಲಿ ನಾಯಕನಾಗಿ ಪ್ರಥ್ವಿ ಅಂಬರ್ ಹಾಗೂ ಇವರಿಗೆ ಜತೆಯಾಗಿ ಅಪ್ಪೆ ಟೀಚರ್ ಖ್ಯಾತಿಯ ನಿರೀಕ್ಷಾ ಶೆಟ್ಟಿ ಅಭಿನಯಿಸಲಿದ್ದಾರೆ ಎನ್ನುವುದು ಸದ್ಯದ ಮಾಹಿತಿ.
ಉಳಿದಂತೆ ಚಿತ್ರದ ತಾರಗಣದಲ್ಲಿ ನವೀನ್. ಡಿ ಪಡೀಲ್, ಅರವಿಂದ್ ಬೋಳಾರ್, ಪ್ರಕಾಶ್ ತುಮಿನಾಡ್, ಮಂಜು ರೈ ಮೂಳೂರು, ದೀಪಕ್ ರೈ ಪಾಣಾಜೆ ಹೀಗೆ ಹಾಸ್ಯ ಕಲಾವಿದರ ದಂಡೇ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ವಿಶೇಷ ಪಾತ್ರದಲ್ಲಿ ದಾರವಾಹಿಗಳಲ್ಲಿ ಅಭಿನಯಿಸಿರುವ ದೀಪಕ್ ಶೆಟ್ಟಿ ಹಾಗೂ ಖ್ಯಾತ ನಿರ್ದೇಶಕ ಸೂರಜ್ ಶೆಟ್ಟಿ ಅಭಿನಯಿಸಲಿದ್ದಾರೆ. ಸಂದೇಶ್ ರಾಜ್ ಬಂಗೇರ ಹಾಗೂ ರೋಹನ್ ಕೋಡಿಕಲ್ ಈ ಚಿತ್ರವನ್ನು ನಿರ್ಮಿಸಲಿದ್ದಾರೆ ಎನ್ನುವುದು ಸದ್ಯದ ಮಾಹಿತಿ.