ಮಂಗಳೂರು, ಅ12(SS): ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಮರುಪರಿಶೀಲನೆಗೆ ಆಗ್ರಹಿಸಿ ಮತ್ತು ಕೇರಳ ಸರ್ಕಾರ ಮೇಲ್ಮನವಿ ಸಲ್ಲಿಸುವಂತೆ ಮಂಗಳೂರಿನಲ್ಲೂ ಅಯ್ಯಪ್ಪ ಭಕ್ತರ ಧ್ವನಿ ಮೊಳಗಿದೆ.
ಕೆಲ ದಿನಗಳ ಹಿಂದೆ ಕದ್ರಿ ಮೈದಾನದಲ್ಲಿ ಬೃಹತ್ ಜಾಗೃತ ಸಮಾವೇಶ ನಡೆಸಲಾಗಿತ್ತು. ಈ ಸಮಾವೇಶದಲ್ಲಿ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದು ಎಂಬ ಸುಪ್ರೀಂ ಕೋರ್ಟ್ ತೀರ್ಪಿಗೆ ಮಂಗಳೂರಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.
ಮಂಗಳೂರಲ್ಲಿ ಶಬರಿಮಲೆ ಉಳಿಸಲು ಅಯ್ಯಪ್ಪ ಸೇವಾ ಸಮಿತಿ ಬೃಹತ್ ಪ್ರತಿಭಟನಾ ಸಭೆ ನಡೆಸಿದ್ದರು. ಮಂಗಳೂರಿನ ಕದ್ರಿ ಮೈದಾನದಲ್ಲಿ ನಡೆದ ಶಬರಿಮಲೆ ಉಳಿಸಿ ಬೃಹತ್ ಜಾಗೃತಿ ಸಮಾವೇಶದ ಪ್ರತಿಭಟನೆಯಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಭಾಗಿಯಾಗಿದ್ದವು. ಜೊತೆಗೆ ನೂರಾರು ಮಹಿಳೆಯರು ಕೂಡ ಸಮಾವೇಶದಲ್ಲಿ ಪಾಲು ಪಡೆದಿದ್ದರು.
ಈ ನಡುವೆ ಪಡುಬಿದಿರೆಯಲ್ಲೂ, ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತಾಗಿ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಮರು ಪರಿಶೀಲನೆ ನಡೆಸುವಂತೆ ಆಗ್ರಹಿಸಿ ಜಿಲ್ಲಾ ಶಬರಿಮಲೆ ಅಯ್ಯಪ್ಪ ಎಸೋಶಿಯೇಶನ್ ಸಂಸ್ಥೆಯಿಂದ ಮುಂದಿನ ನಡೆಯ ಬಗ್ಗೆ ಉಚ್ಚಿಲ ತುಂಬೆ ಕರ್ಕೇರ ಸಭಾ ಭವನದಲ್ಲಿ ಸಮಾಲೋಚನಾ ಸಭೆ ನಡೆದಿದೆ.
ಸಾಸ್ ಸಂಸ್ಥೆಯ ಕಾರ್ಯಧ್ಯಕ್ಷ ಹರೀಶ್ ಶೆಟ್ಟಿ ಪೊಲ್ಯ ಮಾತನಾಡಿ, ಸರ್ವೋಚ್ಚ ನ್ಯಾಯಾಲಯದ ನಿರ್ಧಾರವನ್ನು ನಾವು ವಿರೋಧಿಸುತ್ತಿಲ್ಲ. ತೀರ್ಪಿನಿಂದ ಶಬರಿ ಮಲೆ ಅಯ್ಯಪ್ಪನ ಭಕ್ತರಿಗೆ ನೋವಾಗಿದೆ. ಆ ತೀರ್ಪನ್ನು ಪರಿಶೀಲಿಸುವಂತೆ ಆಗ್ರಹಿಸಿ ಸಾಸ್ ಸಂಸ್ಥೆಯು ಮುಂದಿನ ಅಕ್ಟೋಬರ್ 28 ರ ಭಾನುವಾರ ಕಾಪು ಹಳೆ ಮಾರಿಯಮ್ಮ ಸಭಾಭವನದಿಂದ ಜಾಥಾವನ್ನು ಹಮ್ಮಿಕೊಂಡಿದ್ದು, ಜಾಥಾವು ಜನಾರ್ಧನ ದೇವಸ್ಥಾನದಲ್ಲಿ ಸಮಾಪನಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಮಾತ್ರವಲ್ಲ, ಸಭೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಮರು ಪರಿಶೀಲಿಸುವಂತೆ ಆಗ್ರಹಿಸಲಿದ್ದೇವೆ ಎಂದು ಹೇಳಿದ್ದಾರೆ.