ಉಡುಪಿ, ಜು.06(DaijiworldNews/HR):"ನನಗೆ ಕುಮಾರಸ್ವಾಮಿ ಸುದ್ದಿನೂ ಬೇಡ ಸುಮಲತಾ ಸುದ್ದಿನೂ ಬೇಡ, ನಮ್ಮ ಗಮನ ಇರುವುದು ಮೇಕೆದಾಟು ವಿಚಾರದಲ್ಲಿ" ಎಂದು ಕೆಪಿಸಿಸಿ ಅಧ್ಯಕ್ಷರ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಕುಮಾರಸ್ವಾಮಿ ಸುದ್ದಿನೂ ಬೇಡ ಸುಮಲತಾ ಸುದ್ದಿನೂ ಬೇಡ, ನಮ್ಮ ಗಮನ ಇರುವುದು ಮೇಕೆದಾಟು ವಿಚಾರದಲ್ಲಿ, ಈ ಬಗ್ಗೆ ಮುಖ್ಯಮಂತ್ರಿಗಳು ಸ್ಟಾಲಿನ್ ಗೆ ಪತ್ರ ಬರೆದಿರುವುದು ಸರಿಯಲ್ಲ. ಮೊದಲು ಟೆಂಡರ್ ಕರೆದು ಮೇಕೆದಾಟು ಡ್ಯಾಮ್ ಕಟ್ಟುವ ಕೆಲಸ ಮಾಡಿ. ಡ್ಯಾಮ್ ವಿಚಾರದಲ್ಲಿ ಏರುಪೇರು ಇದ್ದರೆ ಅದಕ್ಕೊಂದು ತಂಡ ಇದ್ದು, ಆ ಮೂಲಕ ಸಮಸ್ಯೆಯನ್ನು ಬಗೆಹರಿಸಿ" ಎಂದಿದ್ದಾರೆ.
ಚಿದಾನಂದ ಸವದಿ ಅವರ ಕಾರು ಅಪಘಾತದ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತಸಿದ ಅವರು, "ಡಿಸಿಎಂ ಲಕ್ಷಣ ಸವದಿ ಪುತ್ರ ಚಿದಾನಂದ ಸವದಿ ಅವರ ಕಾರು ಅಪಘಾತ ವಿಚಾರವಾಗಿ ನನಗೆ ಮಾಹಿತಿ ಇಲ್ಲ, ಈ ಹಿಂದೆ ರವಿ ವಿಚಾರದಲ್ಲೂ ಹೀಗೆ ಆಗಿತ್ತು ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ" ಎಂದಿದ್ದಾರೆ.
ಇನ್ನು ಕಾಂಗ್ರೆಸ್ ವಲಸೆ ಶಾಸಕರ ಮರು ಸೇರ್ಪಡೆ ವಿಚಾರವಾಗಿ ಸದ್ಯಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ, ಆ ಮೇಲೆ ಈ ವಿಚಾರ ಮಾತನಾಡೋಣ" ಎಂದು ಹೇಳಿದ್ದಾರೆ.
ರಾಜ್ಯಕ್ಕೆ ನೂತನ ರಾಜ್ಯಪಾಲರ ನೇಮಕ ವಿಚಾರವಾಗಿ ಮಾತನಾಡಿದ ಅವರು, ಹೊಸ ರಾಜ್ಯಪಾಲರಿಗೆ ಅಭಿನಂದನೆ ಸಲ್ಲಿಸುತ್ತೇನೆ, ನಿರ್ಗಮಿತ ರಾಜ್ಯಪಾಲರು ತಮ್ಮ ಕೈಲಾದ ಕೆಲಸ ಮಾಡಿದ್ದಾರೆ. ರಾಜಕೀಯವಾಗಿ ನಮಗೆ ಸಾಕಷ್ಟು ಭಿನ್ನಾಭಿಪ್ರಾಯ ಇರಬಹುದು, ನಾನು ಅವರನ್ನು ಭೇಟಿ ಮಾಡಲು ಬಯಸಿದಾಗಲೆಲ್ಲ ನಮ್ಮನ್ನು ಅವರು ಕರೆದಿದ್ದಾರೆ ಜೊತೆಗೆ ಕಾಂಗ್ರೆಸ್ ಪಕ್ಷದ ಜೊತೆ ಚರ್ಚೆ ಮಾಡಿದ್ದಾರೆ ಉಳಿದಂತೆ ಪೊಲಿಟಿಕಲ್ ಬಾಸ್ ಗಳು ಹೇಳಿದಂತೆ ಮಾಡಿದ್ದಾರೆ" ಎಂದಿದ್ದಾರೆ.