ಮಂಗಳೂರು, ಜು 06 (DaijiworldNews/MS): ಬಜಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಕ್ರಮವಾಗಿ ಪ್ರವೇಶಿಸಿದ ಶಂಕಿತ ವ್ಯಕ್ತಿಯೋರ್ವನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್ ) ಸಿಬ್ಬಂದಿ ವಶಕ್ಕೆ ಪಡೆದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.
ಜೂನ್ 5 ರ ರಾತ್ರಿ 11 ರ ಸುಮಾರಿಗೆ ಈ ಘಟನೆ ನಡೆದಿದ್ದು, ಹಳೆಯ ವಿಮಾನ ನಿಲ್ದಾಣದ ಎಟಿಎಸ್ ವಿಭಾಗದಲ್ಲಿ ರನ್ ವೇ ಕಾಮಗಾರಿ ನಡೆಯುತ್ತಿದ್ದು ಆ ಸ್ಥಳದಲ್ಲಿ, ಅಕ್ರಮವಾಗಿ ಪ್ರವೇಶಿಸಿದ ವ್ಯಕ್ತಿ ಕಂಡುಬಂದಿದ್ದಾನೆ. ತಕ್ಷಣ ಆತನನ್ನು ಗಸ್ತು ತಿರುಗುತ್ತಿದ್ದ ಸಿಐಎಸ್ಎಫ್ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಸಿಐಎಸ್ಎಫ್ ಯುನಿಟ್ ನ ನಿರೀಕ್ಷಕ ಪ್ರಮೋದ್ ಕುಮಾರ್ ನಿಷೇಧಿತ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿರುವ ಬಗ್ಗೆ ನೀಡಿದ ದೂರಿನಂತೆ ಬಜ್ಪೆ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅನಧಿಕೃತವಾಗಿ ನುಗ್ಗಿದ ವ್ಯಕ್ತಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಪಶ್ಚಿಮ ಬಂಗಾಲದ ಮುರ್ಸಿದಾಬಾದ್ ನ ಬಧುಹಾ ಗ್ರಾಮ ದ ನಿವಾಸಿ ರಾಕೇಶ್ ಎಂದು ಹೇಳಿಕೊಂಡಿದ್ದಾನೆ. ಈತ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದು, ತನ್ನ ಜೊತೆ ಇದ್ದ ಲಾರಿ ಡ್ರೈವರ್ ತನಗೆ ಸಂಬಳ ನೀಡದೆ ಇಲ್ಲೇ ಸಮೀಪದಲ್ಲಿ ಬಿಟ್ಟು ಹೋಗಿದ್ದು ದಾರಿ ಕಾಣದೇ ವಿಮಾನ ನಿಲ್ದಾಣ ಎಂದು ತಿಳಿಯದೇ ಈ ಭಾಗಕ್ಕೆ ಬಂದಿರುತ್ತೇನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.
ಆರೋಪಿ ವಿರುದ್ದ ಅ.ಕ್ರ 129/2021 ಕಲಂ:448 ಐಪಿಸಿ ಮತ್ತು 3A(b) ಪ್ರಕರಣ ದಾಖಲಿಸಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.