ಮಂಗಳೂರು, ಅ 11(SM): ಮಹಾರಾಷ್ಟ್ರದ ಪೂನಾ ಮೂಲದ ಸಮೃದ್ಧ ಜೀವನ್ ಸಂಸ್ಥೆ ತನ್ನ ಗ್ರಾಹಕರಿಗೆ ವಂಚನೆ ಮಾಡಿದೆ ಎಂದು ಆರೋಪಿಸಿ ಏಜೆಂಟರು ಹಾಗೂ ಗ್ರಾಹಕರು ಗುರುವಾರದಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಸ್ಥೆ ವಿರುದ್ಧ ಗ್ರಾಹಕರು ಹಾಗೂ ಏಜೆಂಟರು ಆಕ್ರೋಶ ವ್ಯಕ್ತಪಡಿಸಿದರು.
ಸಮೃದ್ಧ ಜೀವನ್ ಸಂಸ್ಥೆ ೨೦೧೪ರಲ್ಲಿ ಮಂಗಳೂರಿನಲ್ಲಿ ತನ್ನ ಶಾಖೆಯನ್ನು ತೆರೆದಿತ್ತು. ಆ ಮೂಲಕ ನಿರುದ್ಯೋಗಿ ಹಾಗೂ ಸ್ವ ಉದ್ಯೋಗಿಗಳಿಗೆ ಉದ್ಯೋಗವನ್ನು ಕೊಡಿಸುವ ಭರವಸೆ ನೀಡಿತ್ತು. ಹಾಗೂ ಆ ಮೂಲಕ ಅವರನ್ನು ಸಂಸ್ಥೆಯ ಏಜೆಂಟರನ್ನಾಗಿಸಿತ್ತು.
ಏಜೆಂಟರ ಮೂಲಕ ಗ್ರಾಹಕರಿಂದ ತಿಂಗಳ ಹಾಗೂ ದೀರ್ಘ ಕಾಲದ ಠೇವಣಿ ಪಡೆದು, ಅವರಿಗೆ ಸೂಕ್ತ ಕಮಿಷನ್ ನೀಡದೇ ವಂಚನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ವಂಚನೆಗೊಳಗಾದ ಗ್ರಾಹಕರು ಮತ್ತು ಏಜೆಂಟರು ನೆಹರು ಮೈದಾನದಲ್ಲಿ ಸಭೆ ಸೇರಿ ಬೃಹತ್ ಪ್ರತಿಭಟನೆ ನಡೆಸಿದರು. ಸುಮಾರು ೭ ಲಕ್ಷಕ್ಕೂ ಅಧಿಕ ಮಂದಿ ಗ್ರಾಹಕರು, ಏಜೆಂಟರು ಕೋಟಿಗಟ್ಟಲೆ ಹಣ ಕಳೆದುಕೊಂಡು ವಂಚನೆಗೆ ಒಳಗಾಗಿದ್ದಾರೆ.
ಗ್ರಾಹಕರು ಕೂಡಿಟ್ಟ ಹಣದಿಂದ ಚಿರ-ಚರ ಆಸ್ತಿಗಳನ್ನು ಸಂಸ್ಥೆ ಮಾಡಿದೆ. ಶಾಲೆ, ಕಾಲೇಜು, ರೆಸಾರ್ಟ್ಗಳು, ಪಂಚತಾರಾ ಹೊಟೇಲುಗಳು, ಬಹುಮಹಡಿಕಟ್ಟಡಗಳು, ಭೂ ಖರೀದಿ ಹೀಗೆ ಅನೇಕ ವ್ಯವಹಾರ ಮಾಡಿಕೊಂಡಿದ್ದು, ಇದೀಗ ಭಾರತದಾದ್ಯಂತ ಇರುವ ಎಲ್ಲಾ ಶಾಖೆಗಳನ್ನು ಮುಚ್ಚಿದೆ ಎಂದು ಸಂಮೃದ್ಧ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹರೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಗೂ ಮುನ್ನ ಗ್ರಾಹಕರು ಮತ್ತು ಏಜೆಂಟರ ಬೃಹತ್ ಮೆರವಣಿಗೆ ನಡೆಯಿತು.