ಅರಸೀಕೆರೆ, ಅ 11(SM): ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಆಡಳಿತಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠದ ಶ್ರೀಗಳು ಇದೀಗ ಮತ್ತೆ ಸರಕಾರದ ಅಸ್ತಿತ್ವದ ಬಗ್ಗೆ ಮಾತನಾಡಿದ್ದಾರೆ. ಶ್ರೀಗಳು ತಾಳೆಗರಿ ಹಿಡಿದು ನುಡಿಯುವ ಒಗಟಿನ ಮಾತಿಗೆ ನಾನಾ ಅರ್ಥಗಳನ್ನು ಕಲ್ಪಿಸಲಾಗುತ್ತದೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆ ಬಗ್ಗೆ ಭವಿಷ್ಯ ನುಡಿದಿದ್ದ ಶ್ರೀಗಳು ಇಂದು ಸರ್ಕಾರ ಪತನದ ಬಗ್ಗೆ ಮಾತನಾಡಿದ್ದಾರೆ. "ಬಿತ್ತಿದ ಬೆಳಸು ಪರರು ಕೊಯ್ದಾರು" ಎಂದು ಶ್ರೀಗಳು ಹೇಳಿದ್ದರು. ಅದರಂತೆ, ಬಿತ್ತಿದ ಬೀಜ, ಬೆಳೆದು ಬಂದ ಪೈರು ಇದು ಮುಂದಿನ ಅಸೆಂಬ್ಲಿ ಚುನಾವಣೆಯ ಭವಿಷ್ಯ ಎಂದು ಶ್ರೀಗಳು ಹೇಳಿದ್ದರು.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಎನ್ ಮಹೇಶ್ ಅವರು ಕೇವಲ ೩ ತಿಂಗಳಲ್ಲೇ ಇಂದು ಹಲವು ನೆವಗಳನ್ನು ನೀಡಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಾದ ಬೆನ್ನಲ್ಲೇ ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸರಕಾರದ ಭವಿಷ್ಯ ನುಡಿದಿದ್ದಾರೆ. ಮೈತ್ರಿ ಸರ್ಕಾರದ ಭವಿಷ್ಯ ಇನ್ನೆರಡು ತಿಂಗಳು ಮಾತ್ರ ಎಂದಿದ್ದಾರೆ.
ಶ್ರೀಗಳ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಹಲವಾರು ಮಂದಿ ಸರಕಾರದ ಅಳಿವು-ಉಳಿವಿನ ಬಗ್ಗೆ ಹೇಳಿಕೆಗಳನ್ನು ನೀಡಿದ್ದರು. ಆದರೆ ಇದೀಗ ಕೋಡಿಮಠದ ಶ್ರೀಗಳು ಸರಕಾರ ಪತನವಾಗುತ್ತೆ ಅಂದಿರೋದು ಆಡಳಿತ ನಡೆಸೋವರಲ್ಲಿ ಒಂದು ರೀತಿಯಲ್ಲಿ ನಡುಕ ಹುಟ್ಟಿಸಿದೆ.
ಆದ್ರೆ ಶ್ರೀಗಳು ನುಡಿದ ಭವಿಷ್ಯ ಈ ಬಾರಿಯೂ ನಿಜವಾಗುತ್ತಾ ಅನ್ನೋದಕ್ಕೆ ಎರಡು ತಿಂಗಳು ಕಾಯಬೇಕಾಗಿದೆ.