ಲೇಖನ: ಅಹಮ್ಮದ್ ಬಾವಾ, ವಾಮಂಜೂರು
ಮಂಗಳೂರು, ಅ 11(SM): ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧಿಯಾಗಿರುವ ಯಕ್ಷಗಾನ ಇತ್ತೀಚಿನ ದಿನಗಳಲ್ಲಿ ಕೆಲವೊಂದು ವಿವಾದಗಳು ಸುತ್ತಿಕೊಳ್ಳುತ್ತಿವೆ. ಯಕ್ಷಗಾನದ ಮೂಲ ಸಂಸ್ಕೃತಿಗೆ ಧಕ್ಕೆಯಾಗುವ ರೀತಿಯಲ್ಲಿ ಪ್ರಸಂಗಗಳು ನಡೆಯುತ್ತಿವೆ ಎಂಬ ಬಗ್ಗೆ ಆರೋಪಗಳಿವೆ. ಇದಕ್ಕೆ ತಾಜ ಉದಾಹರಣೆ ಎನ್ನುವಂತೆ ಸುಂಕದಕಟ್ಟೆ ಮೇಳದಲ್ಲಿ ಸಮಸ್ಯೆಯೊಂದು ತಲೆದೋರಿದೆ. ಇದರ ಪರಿಣಾಮ ಮೇಳ ಇಬ್ಬಾಗವಾಗಿದೆ.
ಬಜಪೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆಯ ಕರಾವಳಿಯ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲೊಂದು. ಮಂಗಳೂರಿನ ಸುಂಕದಕಟ್ಟೆಯಲ್ಲಿ ಕಳೆದ 45 ವರ್ಷಗಳಿಂದ ಅಂಬಿಕಾ ಅನ್ನಪೂರ್ಣೇಶ್ವರಿ ದೇವಾಲಯ ಹೆಸರಿನಲ್ಲಿ ನಿರಂಜನ ಸ್ವಾಮಿಯವರ ನೇತೃತ್ವದಲ್ಲಿ ನಿರ್ಮಿಸಲಾದ ಯಕ್ಷಗಾನ ಮಂಡಳಿ ಇದಾಗಿದೆ. ಈ ಮೇಳದ ಮೂಲಕ ಹಲವಾರು ಯಕ್ಷ ದಿಗ್ಗಜರು, ಪ್ರಸಿದ್ಧ ಪ್ರಸಂಗಗಳನ್ನು ನೀಡಿ ಹೆಸರುವಾಸಿಯಾಗಿದ್ದಾರೆ. ಆದರೆ, ಇದೀಗ ಸುಂಕದಕಟ್ಟೆ ಮೇಳ ಇಬ್ಭಾಗವಾಗಿದೆ.
ಈ ದಿನಗಳಲ್ಲಿ ಯಕ್ಷಗಾನಕ್ಕೆ ಹಲವಾರು ವಿಘ್ನಗಳು ಎದುರಾಗುತ್ತಿವೆ. ಗಂಡುಕಲೆ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಈ ನಡುವೆ ಇದೀಗ ಮತ್ತೊಂದು ಸಮಸ್ಯೆ ತಲೆದೋರಿದೆ. ಇದಕ್ಕೆ ಕಾರಣ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಬದಲಾಗಿ ಇದೀಗ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಆರಂಭವಾಗಿರುವುದು ಇದಕ್ಕೆ ಮೂಲ ಕಾರಣವಾಗಿದೆ. 43 ವರ್ಷಗಳಿಂದ ನಿರಂಜನ ಸ್ವಾಮಿಗಳ ನೇತೃತ್ವದಲ್ಲಿ ನಡೆಸಲಾಗುತ್ತಿದ್ದ ದಶಾವತಾರ ಯಕ್ಷಗಾನ ಮಂಡಳಿಯನ್ನು ಅವರ ನಿಧನನಂತರ ಸ್ವಾಮೀಜಿಯ ಮಕ್ಕಳಾದ ನಾರಾಯಣ ಪೂಜಾರಿ ಮತ್ತು ಮಹೇಶ್ ಪೂಜಾರಿ ಎಂಬವರು ಬೋಂದೆಲ್ ನಿವಾಸಿ ಜಿ.ಕೆ ಶ್ರೀನಿವಾಸ ಸಾಲ್ಯಾನ್ ಇವರಿಗೆ ಐದು ವರ್ಷಗಳ ಅವಧಿಗೆ ಜವಾಬ್ದಾರಿ ವಹಿಸಿ ಒಪ್ಪಿಗೆ ಪತ್ರ ಪಡೆದಿದ್ದಾರೆ.
ಅದರಂತೆ 2 ವರ್ಷಗಳಿಂದ ಮೇಳ ಶ್ರೀನಿವಾಸ್ ಸಾಲ್ಯಾನ್ ಸುಪರ್ದಿಯಲ್ಲಿ ನಡೆಯುತ್ತಿದೆ. ಇದೀಗ ಏಕಾಏಕಿ ಗೋಪಾಲ ಸುವರ್ಣ ಎಂಬವರು ಈ ಮೇಳದ ಅಧಿಪತ್ಯ ವಹಿಸುವ ನಿಟ್ಟಿನಲ್ಲಿ ಸುಳ್ಳು ಆರೋಪಗಳ ಮೂಲಕ ತಮ್ಮನ್ನು ಮೇಳದಿಂದ ಹೊರಹಾಕಲು ಮುಂದಾಗಿದ್ದಾರೆ. ಆದರೆ ಕಾನೂನು ಪ್ರಕಾರ ಇದು ಸಾಧ್ಯವಾಗದ ಹಿನ್ನಲೆ ಮೇಳದ ಆಡಳಿತ ಮೊಕ್ತೆಸರರಾದ ನಾರಾಯಣ ಪೂಜಾರಿಯೊಂದಿಗೆ ಸೇರಿ ಸುಂಕದಕಟ್ಟೆ ಮೇಳದ ಹೆಸರಿನಲ್ಲಿ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ಮೇಳ ತಯಾರಿಸಿದ್ದಾರೆ. ಈ ಮೇಳ ಆರಂಭಿಸಿರೋದು ಪಕ್ಕ ಹಣ ಮಾಡುವ ವಿಚಾರಕ್ಕೆ ಎಂದು ಶ್ರೀನಿವಾಸ್ ಸಾಲ್ಯಾನ್ ಆರೋಪ ಮಾಡಿದ್ದಾರೆ.
ಮೇಳದಲ್ಲಿದ್ದ ಹಿರಿಯ, ಕಿರಿಯ ಹಲವಾರು ಕಲಾವಿದರನ್ನು ಕೈಬಿಟ್ಟು ಹೊಸ ಕಲಾವಿದರನ್ನು ಹೊಸ ಮೆಳಕ್ಕೆ ಸೇರ್ಪಡೆಗೊಳಿಸಲಾಗಿದೆ. ಇದರಿಂದ ನಮ್ಮ ಬದುಕು ಅತಂತ್ರವಾಗಿದೆ ಅಂತ ಯಕ್ಷಗಾನ ಕಲಾವಿದರು ಅಳಲು ತೋಡಿಕೊಂಡಿದ್ದಾರೆ.
5 ವರ್ಷಗಳ ಒಪ್ಪಂದದ ಮೇರೆಗೆ ಕಲಾವಿದರು ಶ್ರೀನಿವಾಸ್ ಸಾಲ್ಯಾನ್ ಅವರಿಂದ ಹಣವನ್ನು ಪಡೆದುಕೊಂಡಿದ್ದು, ಇದೀಗ ಏಕಾಏಕಿ ಹೊಸ ಮೇಳ ಆರಂಭ ಮಾಡಿ ಕಲಾವಿದರನ್ನು ಕೈಬಿಟ್ಟಿರುವುದರಿಂದ ಇತ್ತ ಕೆಲಸವಿಲ್ಲದೇ ಅತ್ತ ಹಣ ವಾಪಾಸು ನೀಡಲಾಗದ ಪರಿಸ್ಥಿತಿಯಲ್ಲಿ ಕಲಾವಿದರಿದ್ದಾರೆ. ಇನ್ನೊಂದೆಡೆ ಯಕ್ಷಗಾನ ಮಂಡಳಿಯೇ ಬದಲಾಗಿರುವುದು ಸೇವಾಕರ್ತರಲ್ಲಿ, ಭಕ್ತಾಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಈ ನಡುವೆ ಒಪ್ಪಂದದ ಪ್ರಕಾರ ಸುಂಕದಕಟ್ಟೆ ಹಳೆ ಮೇಳವನ್ನು ಇನ್ನು ಮೂರು ವರ್ಷ ನಡೆಸುವ ಅಧಿಕಾರ ತನಗಿದ್ದು ಸೇವಾಕರ್ತರು, ಭಕ್ತಾಭಿಮಾನಿಗಳು ಸಹಕರಿಸಿ ಮುನ್ನಡೆಸಿಕೊಂಡು ಹೋಗುವುದಾಗಿ ಶ್ರೀನಿವಾಸ್ ಸಾಲ್ಯಾನ್ ಹೇಳಿದ್ದಾರೆ.
ಆದರೆ, ಕರಾವಳಿಯ ಪ್ರಸಿದ್ಧ ಮೇಳಗಳಲ್ಲಿ ಒಂದಾದ ಸುಂಕದಕಟ್ಟೆ ಮೇಳದಲ್ಲಿನ ವಿವಾದ ಯಕ್ಷಾಭಿಮಾನಿಗಳೂ, ಸೇವಾಕರ್ತರನ್ನು ಗೊಂದಲಕ್ಕೆ ಈಡು ಮಾಡಿರೋದಂತೂ ಸತ್ಯ.