ಮಂಗಳೂರು, ಅ 11 (MSP): ಜಾತಿ ಬೇಧ ಮರೆತ 20 ಜನರ ತಂಡವೊಂದು ತಮ್ಮ ಜೀವದ ಹಂಗು ತೊರೆದು ಕೊಡಗಿನಲ್ಲಿ ಉಂಟಾದ ನೆರೆ ಸಂದರ್ಭ ಜೋಡುಪಾಲದಲ್ಲಿ ಸುಮಾರು 200 ಮಂದಿಯ ಪ್ರಾಣ ರಕ್ಷಣೆ ಮಾಡಿದ್ದರು. ಇದರಲ್ಲಿದ್ದ 16 ಮಂದಿ ಮುಸ್ಲಿಂ ಯುವಕರಿಗೆ ಸಚಿವ ಜಮೀರ್ ಅಹಮದ್ ಮಡಿಕೇರಿಗೆ ಬೇಟಿ ನೀಡಿದ್ದ ಸಂದರ್ಭ ಉಮ್ರಾ ಯಾತ್ರೆಯ ತೆರಳಲು ನೆರವಿನ ಭರವಸೆ ನೀಡಿದ್ದರು.ಇದೀಗ ಉಳಿದ ನಾಲ್ವರು ಹಿಂದೂ ಯುವಕರಿಗೆ ದೇವಸ್ಥಾನಕ್ಕೆ ಭೇಟಿ ನೀಡಲು ಧನ ಸಹಾಯ ಮಾಡಿ ಸಚಿವ ಜಮೀರ್ ಅಹಮದ್ ಅವರು ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಅ. 11 ರ ಗುರುವಾರ ನಗರದ ಕುಡುಪು ಬಳಿಯ ಕರ್ನಾಟಕ ಹೌಸಿಂಗ್ ಬೋರ್ಡ್ ಜಾಗದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖಾ ಕಚೇರಿಗಳ ಸಂಕೀರ್ಣದ ಮಾಪನ ಭವನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಇದೇ ಕಾರ್ಯಕ್ರಮದಲ್ಲಿ ಒಂದು ಲಕ್ಷ ರೂಪಾಯಿ ಧನ ಸಹಾಯ ಮಾಡಿ ಇತರ ರಾಜಕಾರಣಿಗಳಿಗೆ ಮಾದರಿಯಾದರು. 16 ಮಂದಿ ಮುಸ್ಲಿಂ ಯುವಕರಿಗೆ ಉಮ್ರಾ ಯಾತ್ರೆಯ ಭರವಸೆ ನೀಡಿದ್ದ ಸಚಿವರು ತಂಡದ ಇನ್ನುಳಿದ ನಾಲ್ಕು ಜನ ಹಿಂದೂ ಯುವಕರಾದ ವಿಜಯ ನಿಡಿಂಜಿ, ಬಿಪಿನ್ ಕಲ್ಲುಗುಂಡಿ, ದಿನೇಶ್ ಕುಲ್ಲುಗುಂಡಿ ,ಮತ್ತು ಮನೋಹರ ಕಲಿವೆ ಇವರ ಇಚ್ಚೆಯಂತೆ ದೇವಾಲಯಗಳಿಗೆ ಭೇಟಿ ಒಂದು ಲಕ್ಷ ರೂ. ನಗದನ್ನು ವೇದಿಕೆಯಲ್ಲೇ ಕೊಡುಗೆಯಾಗಿ ನೀಡಿದರು.
ಧನ ಸಹಾಯ ವಿತರಿಸಿದ ಬಳಿಕ ಮಾತನಾಡಿದ ಸಚಿವರು,ಜೀವದ ಹಂಗು ತೊರೆದು ಪ್ರಾಣರಕ್ಷಣೆ ಮಾಡಿದ ಈ ತಂಡದಲ್ಲಿದ್ದ ಯುವಕರೆಲ್ಲರೂ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದಾರೆ. ಇವರೆಲ್ಲರೂ ತಮ್ಮ ಪ್ರಾಣ ಲೆಕ್ಕಿಸಿದೆ ಹಲವರ ಜೀವ ರಕ್ಷಣೆ ಮಾಡಿದ್ದಾರೆ. ಈ ತಂಡದಲ್ಲಿ ನಾಲ್ಕು ಜನ ಹಿಂದೂ ಯುವಕರು ಭಜರಂಗದಳ ಸದಸ್ಯರಾಗಿದ್ದಾರೆ. ಆದರೆ ಇದ್ಯಾವುದೂ ನನಗೆ ಮುಖ್ಯವಲ್ಲ ಜಾತಿ ಧರ್ಮಕ್ಕಿಂತ ಮಾನವೀಯತೆಯ ಧರ್ಮ ದೊಡ್ಡದು ಹೀಗಾಗಿ ಈ ಯುವಕರಿಗೆ ದೇವಸ್ಥಾನಕ್ಕೆ ಹೋಗಲು ಉಡುಗೊರೆಯನ್ನು ನೀಡುತ್ತಿದ್ದೇನೆ ಎಂದು ಹೇಳಿದರು.