ನವದೆಹಲಿ,ಅ 11 (MSP): ತನ್ನ ಗರ್ಲ್ ಫ್ರೆಂಡ್ ನ ಖರ್ಚು-ವೆಚ್ಚಗಳನ್ನು ಪೂರೈಸಲು ಕಳ್ಳತನ ಮಾಡಿದ ಸಾಫ್ಟ್ವೇರ್ ಇಂಜಿನಿಯರ್ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು 24ರ ಹರೆಯದ ಇಂಜಿನಿಯರ್, ಗಾರ್ವಿತ್ ಸಾನ್ಹಿ ಎಂದು ಗುರುತಿಸಲಾಗಿದೆ. ವಿಶೇಷ ಎಂದರೆ ಈತ ಗೂಗಲ್ ಸಂಸ್ಥೆಯ ಉದ್ಯೋಗಿ. ಪೊಲೀಸ್ ತನಿಖೆಯ ವೇಳೆ ತನ್ನ ಗರ್ಲ್ ಫ್ರೆಂಡ್ ನ ಖರ್ಚು ನಿಭಾಯಿಸಲು 10,000 ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕಳೆದ ಸೆ.11ರಂದು ಬಿಬಿಎಂ ಹಾಗೂ ಅದರ ಮಾಧ್ಯಮ ಸಂಸ್ಥೆ ಸೇರಿ ಬಹು ರಾಷ್ಟ್ರೀಯ ಕಂಪೆನಿಗಳ ಹಿರಿಯ ಎಕ್ಸಿಕ್ಯುಟಿವ್ಗಳಿಗಾಗಿ ಇಲ್ಲಿನ ತಾಜ್ ಪ್ಯಾಲೇಸ್ನಲ್ಲಿ ಕಾನ್ಫರೆನ್ಸ್ ಆಯೋಜಿಸಿತ್ತು. ಈ ಕಾನ್ಫರೆನ್ಸ್ ವೇಳೆ ದೇವಯಾನಿ ಜೈನ್ ಎಂಬ ಮಹಿಳೆ ತನ್ನ ಕೈಚೀಲದಿಂದ 10,000 ರೂ. ಕಳವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಕೇಸು ದಾಖಲಿಸಿದ ಬಳಿಕ ಕಾನ್ಫರೆನ್ಸ್ ಹಾಲ್ನಲ್ಲಿದ್ದ ಸಿಸಿಟಿಸಿ ಕ್ಯಾಮೆರಾದ ಪೂಟೇಜ್ ಗಳನ್ನು ಪರಿಶೀಲಿಸಿದರು. ಆಗ ಅವರಿಗೆ ಮಹಿಳೆಯ ವ್ಯಾನಿಟಿಯಿಂದ ವ್ಯಕ್ತಿಯೊಬ್ಬ ಹಣ ಕದಿಯುತ್ತಿರುವ ದೃಶ್ಯ ಕಂಡು ಬಂತು. ಕಾನ್ಫರೆನ್ಸ್ ಆಮಂತ್ರಿತರ ಪಟ್ಟಿಯನ್ನು ಪರಿಶೀಲಿಸಿದ ಪೊಲೀಸರಿಗೆ ಹಣ ಕದ್ದ ವ್ಯಕ್ತಿ ಯಾರೆಂಬುದು ಖಚಿತವಾಯಿತು. ಇದಲ್ಲದೆ ಆರೋಪಿ ಕಾನ್ಫರೆನ್ಸ್ ಕ್ಯಾಬ್ನಲ್ಲಿ ಬಂದಿದ್ದು ಹೋಟೆಲ್ ಹೊರಭಾಗದ ಸಿಸಿ ಟಿವಿ ಕ್ಯಾಮರಾದಿಂದ ತಿಳಿಯಿತು. ಬಳಿಕ ಆರೋಪಿಯನ್ನು ಮಂಗಳವಾರದಂದು ಆತನ ನಿವಾಸದಲ್ಲಿ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಉಪ ಆಯುಕ್ತ ಮಧುರ್ ವರ್ಮಾ ತಿಳಿಸಿದ್ದಾರೆ.
"ನನಗೆ ತೀವ್ರ ಹಣದ ಅಡಚಣೆ ಇತ್ತು. ಗರ್ಲ್ ಫ್ರೆಂಡ್ ಖರ್ಚು ವೆಚ್ಚ ನಿಭಾಯಿಸಲು ತತ್ಕ್ಷಣಕ್ಕೆ ಹಣ ಬೇಕಾಗಿತ್ತು. ಹಾಗಾಗಿ ನಾನು ಹಣ ಕದ್ದೆ '' ಎಂದು ಗಾರ್ವಿತ್ ಪೊಲೀಸರಲ್ಲಿ ಒಪ್ಪಿಕೊಂಡ. ಪೊಲೀಸರು ಆತನ ವಶದಲ್ಲಿದ್ದ ಕದ್ದ ಹಣದ ಪೈಕಿ 3,000 ರೂ.ಗಳನ್ನು ವಶಪಡಿಸಿಕೊಂಡರು ಎಂದು ಪೊಲೀಸ್ ಡೆಪ್ಯುಟಿ ಕಮಿಷವನರ್ ಮಧುರ್ ವರ್ಮಾ ತಿಳಿಸಿದರು.