ಜೋಡುಪಾಲ, ಅ 11 (MSP): ಭೂ ಕುಸಿತ ಮತ್ತು ಪ್ರವಾಹದಿಂದ ಸ್ಮಶಾನ ಮೌನ ಆವರಿಸಿರುವ ಜೋಡುಪಾಲ ಗ್ರಾಮ ಬುಧವಾರ ಹೃದಯವಿದ್ರಾವಕ ಸನ್ನಿವೇಶವೊಂದಕ್ಕೆ ಸಾಕ್ಷಿಯಾಯಿತು.
ಕೊಡಗಿನಲ್ಲಾದ ಪ್ರಕೃತಿ ವಿಕೋಪದ ಸಂದರ್ಭ ಕೆಸರಿನಾರ್ಭಟದ ಪ್ರವಾಹಕ್ಕೆ ಸಿಲುಕಿ ಭೂ ಸಮಾಧಿಯಾದ ಮಂಜುಳಾ (15) ಘಟನೆ ನಡೆದು 56 ದಿನಗಳಾದರೂ ಇಂದಿಗೂ ಪತ್ತೆಯಾಗಿಲ್ಲ. ಇದರಿಂದ ಮನನೊಂದಿರುವ ಆಕೆಯ ಪೋಷಕರು ಮಂಜುಳಾಳ ಪ್ರತಿರೂಪವನ್ನು ತಯಾರಿಸಿ ಅದಕ್ಕೆ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಮೋಕ್ಷ ದೊರಕಿಸುವ ಪ್ರಯತ್ನ ಮಾಡಿದರು.
ಮಗಳಿಗಾಗಿ ಮೋಕ್ಷವಾದರೂ ದೊರಕಲಿ ಎನ್ನುವ ಮಹದಾಸೆ ಮಂಜುಳಾ ಹೆತ್ತವರದ್ದು. ಆಕ್ರಂದಿಸುತ್ತಲೇ ಮಂಜುಳಾ ತಂದೆ ಸೋಮಯ್ಯನವರು ಮಗಳ ಪ್ರತಿರೂಪವನ್ನು ಭತ್ತದ ಹುಲ್ಲು, ಅಡಿಕೆ ಹಾಳೆ ಬಳಸಿ ಖುದ್ದು ತಯಾರಿಸಿದ್ರು. ಹೆಣ್ಣಿನ ರೂಪ ಪಡೆದ ಬಳಿಕ ಅದಕ್ಕೆ ರೇಷ್ಮೆ ಸೀರೆ ತೊಡಿಸಿ, ಚಂದದ ಅಲಂಕಾರ ಮಾಡಿದ. ಅದಕ್ಕೆ ರೂಪ ಬರುತ್ತಿದ್ದಂತೆ ತಮ್ಮ ಮಗಳೇ ಎದುರು ನಿಂತಿದ್ದಾಳೆ ಎಂಬಂತಿತ್ತು ಹೆತ್ತವರ ಮುಖಭಾವ. ಆಕೆಯ ಇಷ್ಟದ ವ್ಯಾನಿಟಿ ಬ್ಯಾಗ್ ಹಾಗೂ ಆಕೆ ಥ್ರೋಬಾಲ್ ಕ್ರೀಡೆಯಲ್ಲಿ ಗೆದ್ದ ಪದಕ ತೊಡಿಸಿ ಪ್ರತಿರೂಪವನ್ನು ಮದುಮಗಳಂತೆ ಸಿಂಗರಿಸಿದರು. ತದನಂತರ ಕುಡಿಯ ಸಂಪ್ರದಾಯದಂತೆ ಮದುವೆ ಶಾಸ್ತ್ರವನ್ನೂ ಮಾಡಿದರು.
ಮಂಜುಳಾ ನಾಪತ್ತೆಯಾದ ಸ್ಥಳದಲ್ಲೇ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಿದ ಬಾಲಕಿಯ ತಂದೆ ಕುಡಿಯರ ಸೋಮಯ್ಯ ಮತ್ತು ತಾಯಿ ಜಯಂತಿ ಅವರ ಕಣ್ಣೀರು ಮನ ಮಿಡಿಯುವಂತಿತ್ತು. ಕಂಬನಿ ಹೊರಜಾರದಂತೆ ಗಟ್ಟಿ ಹೃದಯ ಮಾಡಿಕೊಂಡಿದ್ದ ಆಕೆಯ ಮೂವರು ಅಣ್ಣಂದಿರು ತಂಗಿಯ ಪ್ರತಿರೂಪಕ್ಕೆ ಹೆಗಲುಕೊಟ್ಟು ಹೊರುವ ಸಂದರ್ಭ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಅಲ್ಲಿ ನೆರೆದಿದ್ದವರ ಮನಮಿಡಿಯುವಂತಿತ್ತು.
ಅಲ್ಲಿ ನೆರೆದಿದ್ದ ಮಂಜುಳಾಳ ಕುಟುಂಬಸ್ಥರು, ಮದೆಮಹೇಶ್ವರ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಬೆಟ್ಟತ್ತೂರು ಗ್ರಾಮಸ್ಥರು ಕಂಬನಿಗರೆದರು. ನಂತರ ಮಂಜುಳಾಳ ಪ್ರತಿರೂಪವನ್ನು ಆಕೆಯ ಹುಟ್ಟೂರು ಬೆಟ್ಟತ್ತೂರುವಿಗೆ ಕೊಂಡೊಯ್ದು ಕುಟುಂಬಕ್ಕೆ ಸೇರಿದ ಸ್ಮಶಾನದಲ್ಲಿ ಮಣ್ಣು ಮಾಡಲಾಯಿತು.
ಮೂಲತಃ ಬೆಟ್ಟತ್ತೂರಿನ ನಿವಾಸಿ ಸೋಮಯ್ಯ ಅವರ ಪುತ್ರಿ ಮಂಜಳಾ, ಮದೆನಾಡಿನ ಮದೆಮಹೇಶ್ವರ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ವ್ಯಾಸಂಗ ಮಾಡುತ್ತಿದ್ದಳು. ಬೆಟ್ಟತ್ತೂರಿನಿಂದ ಮದೆನಾಡು ಕಡೆಗೆ ಒಂದೇ ಬಸ್ ವ್ಯವಸ್ಥೆ ಇದ್ದ ಹಿನ್ನೆಲೆಯಲ್ಲಿ ಆಕೆಯನ್ನು ಜೋಡುಪಾಲದ ತನ್ನ ಸಂಬಂಧಿಕರಾದ ಬಸಪ್ಪ ಅವರ ಮನೆಯಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಮಂಜುಳಾ ಅತ್ಯುತ್ತಮ ಥ್ರೋಬಾಲ್ ಆಟಗಾರ್ತಿಯಾಗಿದ್ದು, ಕಳೆದ ವರ್ಷ ಉಡುಪಿಯಲ್ಲಿ ನಡೆದ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಗಮನಾರ್ಹ ಸಾಧನೆ ಮಾಡಿದ್ದಳು. ಈ ಬಾರಿಯ ಕ್ರೀಡಾಕೂಟಕ್ಕೂ ಈಕೆಯನ್ನು ಆಯ್ಕೆ ಮಾಡಲಾಗಿತ್ತು.
ಆಗಸ್ಟ್ 16ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಭಾರೀ ಮಳೆಯಿಂದ ಸಂಭವಿಸಿದ ಜಲ ಪ್ರಳಯದಿಂದಾಗಿ ಬಸಪ್ಪ ಅವರ ಮನೆಗೆ ಸಂಪೂರ್ಣ ನೀರು ನುಗ್ಗಿತ್ತು. ಮನೆಯಲ್ಲಿದ್ದ ಬಸಪ್ಪ, ಗೌರಮ್ಮ, ಮೋನಿಶಾ ಸೇರಿದಂತೆ ಮಂಜುಳಾ ಕೂಡ ನೀರಿನಲ್ಲಿ ಮನೆ ಸಹಿತ ಕೊಚ್ಚಿಕೊಂಡು ಹೋಗಿದ್ದರು. ಮಂಜುಳಾ ಹೊರತುಪಡಿಸಿ ಮೂವರ ಶವಗಳು ಪತ್ತೆಯಾಗಿ ಅಂತ್ಯ ಸಂಸ್ಕಾರವೂ ನಡೆದಿದೆ. ಮಂಜುಳಾ ಜಲಪ್ರಳಯದಲ್ಲಿ ಕಣ್ಮರೆಯಾಗಿ ಇಂದಿಗೆ 56 ದಿನಗಳೇ ಕಳೆದಿದೆ, ಆದರೆ ಆಕೆ ಮಾತ್ರ ಇನ್ನೂ ಪತ್ತೆಯಾಗಿಲ್ಲ.