ಕೋಟ, ಅ 11 (MSP):ಮಳೆ ನೀರನ್ನು ದೊಡ್ಡ ಪ್ರಮಾಣದಲ್ಲಿ ರಕ್ಷಿಸುವ ಕಾರ್ಯ ಮಾಡಬೇಕಾಗಿದೆ. ನೀರಿಗಾಗಿ ನದಿಯನ್ನೇ ತಿರುಗಿಸುವ ಯೋಜನೆ ಸಲ್ಲದು. ಮಳೆ ನೀರನ್ನು ಹಿಡಿದಿಟ್ಟು ಶೇಖರಿಸುವ ವ್ಯವಸ್ಥೆ ಮಾಡಿದರೆ ಮುಂದೆ ನಮಗೆ ನೀರು ದೊರೆಯಲು ಸಾಧ್ಯ ಎಂದು ಜಲ ಮತ್ತು ಪರಿಸರ ತಜ್ಞ ಶ್ರೀ ಪಡ್ರೆ ಹೇಳಿದರು.
ಅವರು ಬುಧವಾರ ಕೋಟತಟ್ಟು ಗ್ರಾಮ ಪಂಚಾಯಿತಿ,ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಉಡುಪಿ ಡಾ.ಶಿವರಾಮ ಕಾರಂತ ಟ್ರಸ್ಟ್ ಆಶ್ರಯದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವದ ಅಂಗವಾಗಿ ನಡೆದ 14ನೇ ವರುಷದ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಎಳೆಯರಿಗೆ ನೀರಿನ ಪಾಠ ಮಾಡಿದಾಗ, ನೀರು ಸಂರಕ್ಷಿಸುವ ವ್ಯವಸ್ಥೆ ಆಗಬಹುದು. ಪರಿಸರ ಸಂರಕ್ಷಣೆ ಆಂದೋಲನ ರೀತಿಯಲ್ಲಿ ನಡೆಯಬೇಕಾಗಿದೆ. ಇಡೀ ದೇಶಕ್ಕೆ ಮಹಾರಾಷ್ಟ್ರದ ಜಲನಯನ ಯೋಜನೆ ಮಾದರಿಯಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದರೆ ನಾಚಿಕೆಯ ಸಂಗತಿ. ಸಮುದಾಯದವರು ಮನಸ್ಸು ಮಾಡಿ ಇದನ್ನು ನಿಲ್ಲಿಸುವ ಪ್ರಯತ್ನ ಮಾಡಬೇಕಾಗಿದೆ. ನಮ್ಮ ಜಿಲ್ಲೆಯ ಕೆಲವು ತಾಲೂಕುಗಳು ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಿರುವುದು ಬುದ್ದಿವಂತರ ಜಿಲ್ಲೆಗೆ ನಾಚಿಕೆಯಾದಂತಾಗಿದೆ. ನೆಲ,ಜಲದ ಬಗ್ಗೆ ಕೆಲಸ ಮಾಡಿದ ಕಾರಂತರ ಹೆಸರಿನಲ್ಲಿ ಅವರ ಹುಟ್ಟೂರ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆ ಎನಿಸಿದೆ ಎಂದರು.
ಪ್ರಶಸ್ತಿಯನ್ನು ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಕಾರಂತರ ಹೆಸರಿನ ಪ್ರಶಸ್ತಿಗೆ ಯೋಗ್ಯರನ್ನೇ ಆಯ್ಕೆ ಮಾಡಬೇಕಾಗಿದೆ. ಆಗ ಪ್ರಶಸ್ತಿಗೂ ಬೆಲೆ ಬರುತ್ತದೆ, ಕಾರಂತರ ಹೆಸರು ಉಳಿಯುತ್ತದೆ. ಕಾರಂತರು ಕಲೆ, ಸಾಹಿತ್ಯ, ವಿಶೇಷವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಯಾರಿಗೂ ಅಂಜದೇ ಧೈರ್ಯವಾಗಿ ಕೆಲಸ ಮಾಡಿದ್ದರಿಂದ ಕಾರಂತರು ತೀರಿಕೊಂಡು ೧೭ ವರ್ಷಗಳೇ ಸಂದರೂ ಅವರ ಹೆಸರು ಅಜರಾಮರವಾಗಿ ಉಳಿದುಕೊಂಡಿದೆ. ಕಾರಂತರು ಎಲ್ಲ ಕ್ಷೇತ್ರದಲ್ಲಿ ದುಡಿದು, ಎಲ್ಲರ ಗಮನವನ್ನು ಸೆಳೆದವರು ಎಂದರು.
ಉಡುಪಿ-ಚಿಕ್ಕಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ತಿಂಗಳಾಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಾರಂತ ಹುಟ್ಟೂರ ಪ್ರಶಸ್ತಿಯ ರೂವಾರಿ,ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಉಡುಪಿ ತಾಲೂಕು ಪಂಚಾಯಿತಿ ಅಧ್ಯಕ್ಷ ನಳಿನಿ ಪ್ರದೀಪ್ ರಾವ್,ಉಡುಪಿ ತಾಲೂಕು ಪಂಚಾಯಿತಿ ಸದಸ್ಯೆ ಲಲಿತಾ ಪೂಜಾರಿ, ಕಾರ್ಯ ನಿರ್ವಹಣಾಧಿಕಾರಿ ಮೋಹನ್ ರಾಜ್,ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನೀತಾ ಶ್ರೀಧರ ಆಚಾರ್ಯ ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ,ಕೋಟತಟ್ಟು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೀರಾ,ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ.ಕುಂದರ್ ಸ್ವಾಗತಿಸಿದರು.ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯ ಯು.ಎಸ್.ಶೆಣೈ ಅನಿಸಿಕೆ ಹಂಚಿಕೊಂಡರು. ಗಾಯಕ ಸುರೇಶ್ ಕಾರ್ಕಡ ಆಶಯ ಗೀತೆ ಹಾಡಿದರು.ಸಾಲಿಗ್ರಾಮ ಮಕ್ಕಳ ಮೇಳದ ಶ್ರೀಧರ ಹಂದೆ ಯಕ್ಷಗಾನ ಶೈಲಿಯಲ್ಲಿ ಶ್ರೀ ಪಡ್ರೆ ಅವರನ್ನು ಪರಿಚಯಿಸಿದರು.ಕುಮಾರಿ ಸುಶ್ಮಿತಾ ಪಾರಂಪಳ್ಳಿ ನಿರೂಪಿಸಿದರು.
ಕೋಟತಟ್ಟು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಜಾತ ಲಕ್ಕಪ್ಪನವರ್ ವಂದಿಸಿದರು.ಸಮಾರಂಭದ ಬಳಿಕ ತೆಂಕು ಬಡಗಿನ ಕಲಾವಿದರಿಂದ ಯಕ್ಷಗಾನ ನಾಟ್ಯ ವೈಭವ ಜರುಗಿತು.