ಮೈಸೂರು,ಅ 10 (MSP): ಈ ಬಾರಿ ಮೈಸೂರಿನಲ್ಲಿ ದಸರಾ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡಿದ್ದು ಯುವರಾಜ. ಅಜ್ಜಿ ಪ್ರಮೋದಾ ದೇವಿ ಹಾಗೂ ತಾಯಿ ತ್ರಿಷಿಕಾ ಕುಮಾರಿ ಜತೆ ಮೈಸೂರಿನ ಯುವರಾಜ ಆದ್ಯವೀರ್ ಕಾಣಿಸಿಕೊಂಡಿದ್ದು, ದಸರಾದ ಸೊಬಗನ್ನು ಇನ್ನಷ್ಟು ಇಮ್ಮಡಿಗೊಳಿಸಿತ್ತು.
ದೇಶದಲ್ಲಿ ಪ್ರಜಾಪ್ರಭುತ್ವದ ಆಡಳಿತದ ನಡುವೆಯೂ ಗತಕಾಲದ ರಾಜಾಳ್ವಿಕೆಯ ಪ್ರತಿಬಿಂಬದಂತೆ ನಡೆದುಕೊಂಡು ಬರುತ್ತಿರುವ ಸಾಂಪ್ರದಾಯಿಕ ಖಾಸಗಿ ದರ್ಬಾರ್ನಲ್ಲಿ ಮೈಸೂರಿನ ರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ದರ್ಬಾರ್ ಹಾಲ್ನಲ್ಲಿ ಬೆಳ್ಳಿ ಕುರ್ಚಿಯ ಮೇಲೆ ಕುಳಿತು ಕಳಶಗಳಿಗೆ ಪೂಜೆ ನೆರವೇರಿಸಿದರು.ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಖಾಸಗಿ ದರ್ಬಾರ್ ಅ.10ರಿಂದ 19ರವರೆಗೂ ನಡೆಯಲಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಂಪ್ರದಾಯದಂತೆ ಖಾಸಗಿ ದರ್ಬಾರ್ ಆರಂಭಿಸಲಿದ್ದು, ನಾಲ್ಕನೇ ಬಾರಿಗೆ ರತ್ನ ಖಚಿತ ಸಿಂಹಾಸನಾರೋಹಣ ಮಾಡಲಿದ್ದಾರೆ.
ಖಾಸಗಿ ದರ್ಬಾರ್ ಸಂದರ್ಭ ಒಂದೆಡೆ ರಾಜ ಯದುವೀರ್ ತಿಳಿ ನೀಲಿ ಬಣ್ಣದ ಸಾಂಪ್ರದಾಯಿಕ ಮೈಸೂರು ಪೇಟ,ಗುಲಾಬಿ ವರ್ಣದ ನಿಲುವಂಗಿ ಹಾಗೂ ಪೈಜಾಮಾ ಧರಿಸಿ ರಾಜಪೋಷಾಕಿನಲ್ಲಿ ಕಂಗೊಳಿಸಿದ್ರು. ಇನ್ನು ಒಡೆಯರ್ ವಂಶಸ್ಥರ 28ನೇ ಕುಡಿ, ರಾಜ ಯದುವೀರ್ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಅವರ ಪುತ್ರ ಯುವರಾಜ ಆದ್ಯವೀರ್ ಒಡೆಯರ್ ತನ್ನ ಅಜ್ಜಿ, ರಾಜಮಾತೆ ಪ್ರಮೋದಾ ದೇವಿ ಹಾಗೂ ತಾಯಿ ತ್ರಿಷಿಕಾ ಕುಮಾರಿ ಜತೆಗೂಡಿ ತಮ್ಮ ಮೊದಲ ದಸರಾ ಸಂಭ್ರಮವನ್ನು ಸವಿದರು.ಯುವರಾಜ ಆದ್ಯವೀರ್ ಒಡೆಯರ್ ತಿಳಿ ಗುಲಾಬಿ ಬಣ್ಣದ ಬಟ್ಟೆಯಲ್ಲಿ ಕಂಗೊಳಿಸುತ್ತಿದ್ದು ಕಾಲಿಗೆ ಚಿಕ್ಕದಾದ ಕಡಗ ಧರಿಸಿದ್ದರು