ಬಂಟ್ವಾಳ,ಅ 10 (MSP): ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೋರ್ವ ಮೃತ ಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕೆದಿಲ ಎಂಬಲ್ಲಿ ಅ.೦೯ ರ ಮಂಗಳವಾರ ನಡೆದಿದೆ. ಕೆದಿಲ ಗ್ರಾಮದ ಕರಿಮಜಲು ನಿವಾಸಿ ದಯಾನಂದ (30 ) ಮೃತಪಟ್ಟವರು. ಮನೆಯ ಸರ್ವೀಸ್ ವಯರ್ ರಿಪೇರಿ ಕೆಲಸ ಮಾಡುತ್ತಿದ್ದ ವೇಳೆ ಅವರು ವಿದ್ಯುತ್ ಹರಿದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಮೃತಪಟ್ಟ ದಯಾನಂದ ಅವರು ಟೈಲ್ಸ್ ಹಾಗೂ ಅಡುಗೆ ಕೆಲಸಗಾರರಾಗಿ ದುಡಿಯುತ್ತಿದ್ದರು. ಮಂಗಳವಾರ ಅವರ ಮನೆಯ ಸರ್ವೀಸ್ ವಿದ್ಯುತ್ ವಯರ್ ಹಾಳಾಗಿ ಹೋಗಿದೆ ಎನ್ನುವ ಕಾರಣಕ್ಕಾಗಿ ವಿದ್ಯುತ್ ವಯರಿಂಗ್ ನ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿರಬೇಕು ಎಂದು ಹೇಳಲಾಗುತ್ತದೆ. ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.