ಮಂಗಳೂರು, ಅ 10 (MSP): ನಗರದ ಖಾಸಗಿ ಕಾಲೇಜಿನಲ್ಲಿ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ ಆರೋಪವು ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ಸಾಬೀತಾಗಿದ್ದು, ಶಿಕ್ಷೆಯ ಬಗ್ಗೆ ಅ.22 ರಂದು ತೀರ್ಪು ಪ್ರಕಟವಾಗಲಿದೆ.
ಮೂರನೇ ವರ್ಷದ ಬಿಬಿಎ ವಿದ್ಯಾರ್ಥಿಯಾಗಿದ್ದ ಮುಹಮ್ಮದ್ ಶಾ ನವಾಝ್ (22) ಅಪರಾಧಿ. ಈತ 2016 ಅ.20ರಂದು ಮಧ್ಯಾಹ್ನ ಪ್ರಾಂಶುಪಾಲ ರೆ.ಫಾ.ಮೈಕಲ್ ಸಾಯಮಯರೊ ಮೇಲೆ ಹಲ್ಲೆ ನಡೆಸಿದ್ದ ಎಂದು ಆರೋಪಿಸಿ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ನೇರಳೆ ವೀರಭದ್ರಯ್ಯ ಭವಾನಿ ಮಂಗಳವಾರ ತೀರ್ಪು ಪ್ರಕಟಿಸಿದ್ದಾರೆ. ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ವಾದಿಸಿದ್ದರು.
ಪ್ರಕರಣದ ಹಿನ್ನೆಲೆ: ಅಂದು, ಮುಹಮ್ಮದ್ ಶಾ ನವಾಝ್ ಪ್ರತಿದಿನ ವಿಳಂಬವಾಗಿ ತರಗತಿಗೆ ಹಾಜರಾಗುತ್ತಿದ್ದ. ಈ ಬಗ್ಗೆ ಆತನಿಗೆ ಹವಾರು ಬಾರಿ ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಎಚ್ಚರಿಕೆ ನೀಡಿದ್ದರು.ಘಟನೆಯ ದಿನವೂ ತಡವಾಗಿ ಬಂದ ಕಾರಣಕ್ಕೆ ಉಪನ್ಯಾಸಕರು ಹಾಜರಿ ನೀಡಿರಲಿಲ್ಲ. ಸಿಟ್ಟುಗೊಂಡ ಈತ ತರಗತಿಯಲ್ಲಿ ಉಪನ್ಯಾಸಕರ ಎದುರಿನಲ್ಲೇ ಹಾಜರಿ ಪುಸ್ತಕ ಹರಿದು ಹಾಕಿದ್ದ. ಈ ಬಗ್ಗೆ ದೂರು ಬಂದ ಹಿನ್ನೆಲೆ ಪ್ರಾಂಶುಪಾಲರು ಹೆತ್ತವರನ್ನು ಕರೆದುಕೊಂಡು ಬರಲು ಹೇಳಿದ್ದರು.
ಆದರೆ ಮುಹಮ್ಮದ್ ಪ್ರಾಂಶುಪಾಲರ ಮಾತಿಗೂ ಕ್ಯಾರೇ ಅನ್ನದೇ ಹೆತ್ತವರನ್ನೂ ಕರೆ ತಂದಿರಲಿಲ್ಲ. ಈ ಬಗ್ಗೆ ಪ್ರಾಂಶುಪಾಲರು ವಿಚಾರಿಸಿ, ವಿವಿ ನಿಯಮಾವಳಿಯಂತೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಿಲ್ಲ ಎಂದಿದ್ದರು. ಇದರಿಂದ ಆಕ್ರೋಶಗೊಂಡ ಮುಹಮ್ಮದ್ ಪ್ರಾಂಶುಪಾಲರು ಊಟಕ್ಕೆ ಹೋಗುತ್ತಿದ್ದಾಗ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಬಿಗಿಯಾಗಿ ಹಿಡಿದು, ಪುಸ್ತಕವನ್ನು ಸುರುಳಿಯಾಗಿಸಿ ಕಿವಿ ಹಾಗೂ ತಲೆಯ ಹಿಂಭಾಗಕ್ಕೆ ಹಲ್ಲೆ ನಡೆಸಿದ್ದ. ಈ ಬಗ್ಗೆ ಬಂದರು ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಅಂದಿನ ಪಿಎಸ್ಸೈ ಮದನ್ ಪ್ರಕರಣದ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ನೇರಳೆ ವೀರಭದ್ರಯ್ಯ ಭವಾನಿ ತೀರ್ಪು ಪ್ರಕಟಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ವಾದಿಸಿದ್ದರು.
ನಡತೆ ಆಧಾರದಲ್ಲಿ ಶಿಕ್ಷೆ : ಅಪರಾಧಿಯ ಮುಂದಿನ ಭವಿಷ್ಯವನ್ನು ಪರಿಗಣಿಸಿ ಆತನ ನಡತೆ ಆಧಾರದಲ್ಲಿ ಶಿಕ್ಷೆಯ ಬಗ್ಗೆ ಅ.22ರಂದು ತೀರ್ಪು ಪ್ರಕಟವಾಗಲಿದೆ. ನಡತೆಯ ಬಗ್ಗೆ ವರದಿ ನೀಡಲು ನ್ಯಾಯಾಧೀಶರು ಪರಿವೀಕ್ಷಣಾಧಿಕಾರಿ ಅವರನ್ನು ನೇಮಕ ಮಾಡಿದ್ದಾರೆ. ಅವರು ಅಪರಾಧಿಯ ಮನೆ, ಪರಿಸರ, ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆಯೇ ಎನ್ನುವ ಮೊದಲಾದ ವಿಷಯಗಳಿಗೆ ಸಂಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡಲಿದ್ದಾರೆ. ವರದಿಯ ಆಧಾರದಲ್ಲಿ ಶಿಕ್ಷೆ ಪ್ರಕಟವಾಗಲಿದೆ.
ಸನ್ನಡತೆ ಆಧಾರದಲ್ಲಿ ಶಿಕ್ಷೆಯಾಗದೇ ಇದ್ದರೆ ಬಾಂಡ್ ಪಡೆದು, ಒಂದು ವರ್ಷ ಕಾಲ ನಿಗಾ ಇಡಲಾಗುತ್ತದೆ. ಮತ್ತೆ ಪ್ರಕರಣ ದಾಖಲಾದರೆ ಈ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ಈಗಾಗಲೇ ಆರೋಪಿ ವಿರುದ್ಧ ಠಾಣೆಯಲ್ಲಿ ಕೊಲೆ ಯತ್ನ, ಜೀವ ಬೆದರಿಕೆ ಪ್ರಕರಣ ದಾಖಲಾಗಿದ್ದರೂ, ಹಲ್ಲೆ, ತಡೆದು ನಿಲ್ಲಿಸಿರುವುದು, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣ ಮಾತ್ರ ಸಾಬೀತಾಗಿದೆ ಎಂದು ಹರಿಶ್ಚಂದ್ರ ಉದ್ಯಾವರ ತಿಳಿಸಿದ್ದಾರೆ.