ಕುಂದಾಪುರ, ಅ10 (MSP): ಮಹಾಲಯ ಅಮಾವಾಸ್ಯೆ ಪ್ರಯುಕ್ತ ಸಮುದ್ರ ಸ್ನಾನ ಮಾಡುವ ಸಂದರ್ಭ ಬೈಂದೂರು ಶಾಸಕ ಅಲೆಯ ಹೊಡೆತಕ್ಕೆ ಸಿಲುಕಿ ಆಯಾತಪ್ಪಿ ಬಿದ್ದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾಲಯ ಅಮಾವಾಸ್ಯೆಯಂದು ಸಮುದ್ರ ಸ್ನಾನ ಮಾಡಬೇಕು ಎನ್ನುವುದು ಕರಾವಳಿ ಭಾಗದಲ್ಲಿರುವ ಜನರ ನಂಬಿಕೆ. ಇದೇ ಹಿನ್ನಲೆಯಲ್ಲಿ ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಕಾರ್ಯಕ್ರಮಗಳನ್ನೆಲ್ಲ ಮುಗಿಸಿ ತ್ರಾಸಿ ಎಂಬಲ್ಲಿನ ಬೀಚ್ ಗೆ ಸೋಮವಾರ ಬಂದಿದ್ದರು. ಸುಮಾರು 11 ಗಂಟೆಯ ವೇಳೆಗೆ ಅಮಾವಾಸ್ಯೆ ಹಿನ್ನಲೆಯಲ್ಲಿ ಕಿರಿ ಮಂಜೇಶ್ವರ ಕಡಲ ಕಿನಾರೆಯಲ್ಲಿ ತಮ್ಮ ಜತೆಗಿದ್ದ ಕೆಲವರೊಂದಿಗೆ ಸಮುದ್ರಕ್ಕೆ ಇಳಿದಿದ್ದರು.
ಜತೆಗಿದ್ದವರು ಎಚ್ಚರಿಕೆಯ ಮಾತುಗಳನ್ನು ಹೇಳಿದರೂ ಅವರು ಸಮುದ್ರದಲ್ಲಿ ಮುಂದೆ ಸಾಗಿದ್ದರು. ಸ್ಥಳೀಯ ಮೀನುಗಾರರು ಮುಂದೆ ಹೋಗದಂತೆ ಎಚ್ಚರಿಸಿದರೂ ಶಾಸಕರು ಮುಂದೆ ಸಾಗುತ್ತಲೆ ಇದ್ದರು. ಸಮುದ್ರದಲ್ಲಿ ದೊಡ್ಡ ಅಲೆ ಕಂಡು ಹಿಂದಕ್ಕೆ ಬರುವಂತ ಸಂದರ್ಭ ಅಲೆಯ ರಭಸಕ್ಕೆ ಸಿಕ್ಕ ಶಾಸಕರು ಸಮುದ್ರಕ್ಕೆ ಬಿದ್ದರು. ತಕ್ಷಣ ಜತೆಗಿದ್ದವರು ಸುತ್ತುವರಿದು ಅಪಾಯದಿಂದ ಪಾರುಮಾಡಿದರು. ಸಮುದ್ರ ಸ್ನಾನದ ಅನಂತರ ಶಾಸಕರು ಕಿರಿಮಂಜೇಶ್ವರ ಶ್ರೀ ಅಗಸ್ತೇಶ್ವರ ದೇವರ ದರ್ಶನ ಪಡೆದರು.