ಮಂಗಳೂರು, ಅ 09(SM): ಶಬರಿಮಲೆಯ ಶ್ರೀ ಅಯ್ಯಪ್ಪ ಸನ್ನಿಧಿಗೆ ಮಹಿಳೆಯ ಪ್ರವೇಶ ವಿರೋಧಿಸಿ ಮಂಗಳೂರು ಅಯ್ಯಪ್ಪ ಸೇವಾ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಶಬರಿಮಲೆ ಉಳಿಸಿ ಜಾಗೃತಿ ಸಮಾವೇಶ ನಗರದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು. ಮಂಗಳೂರಿನ ಕದ್ರಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳು ಭಾಗವಹಿಸಿದ್ದವು.
ಇನ್ನು ಜಾಗೃತಿ ಸಮಾವೇಶದಲ್ಲಿ ನೂರಾರು ಮಹಿಳೆಯರೂ ಕೂಡ ಭಾಗವಹಿಸಿ ಸುಪ್ರೀಂ ಕೋರ್ಟ್ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿದರು.
ಇನ್ನು ಇದೇ ಸಂದರ್ಭ ಮಾತನಾಡಿದ ವಿಶ್ವ ಹಿಂದು ಪರಿಷತ್ ಪ್ರಾಂತೀಯ ಸಮಿತಿಯ ಸಂಚಾಲಕ ಎಂ.ಬಿ.ಪುರಾಣಿಕ್, ಶಬರಿಮಲೆ ಕ್ಷೇತ್ರಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡುವ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಮರುಪರಿಶೀಲನೆ ಮಾಡಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಶಬರಿಮಲೆ ಅತೀ ಪವಿತ್ರ ಸ್ಥಳವಾಗಿದ್ದರಿಂದ ಅಲ್ಲಿಗೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ಇಲ್ಲ. ಇದು ಹಿಂದಿನಿಂದಲೂ ನಂಬಿಕೊಂಡು ಬಂದ ಆಚಾರವಾಗಿದೆ. ಈ ನಂಬಿಕೆಯನ್ನು ಮುಂದೆಯೂ ಉಳಿಸಿಕೊಳ್ಳಬೇಕು. ಇದನ್ನು ನ್ಯಾಯಾಲಯ ಮತ್ತು ಸರಕಾರ ಒಪ್ಪಿಕೊಳ್ಳಬೇಕು. ಜನರ ಧಾರ್ಮಿಕ ನಂಬಿಕೆಗಳಿಗೆ ಅಡಚಣೆ ಉಂಟುಮಾಡಬಾರದು. ಇಲ್ಲಿನ ಪಾವಿತ್ರ್ಯತೆ ಉಳಿಸಲು ಕೇರಳ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.