ಮಂಗಳೂರು, ಅ 09(SM): ಸ್ಮಾರ್ಟ್ ಸಿಟಿ ಅನುದಾನವನ್ನು ಕಸಾಯಿಖಾನೆಗೆ ನಿಡುವುದಾಗಿ ತಿಳಿಸಿದ್ದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿಕೆಗೆ ಜಿಲ್ಲಾ ಬಿಜೆಪಿ ಘಟಕದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ವಿರುದ್ಧ ಮಂಗಳವಾರದಂದು ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಬಿಜೆಪಿ ಸುದ್ದಿಗೋಷ್ಠಿ ನಡೆಸಿದೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಸಚಿವರು ಜನರ, ಬಿಜೆಪಿ ಶಾಸಕರ ಅಭಿಪ್ರಾಯ ಕೇಳಲಿಲ್ಲ. 15 ಕೋಟಿ ರೂಪಾಯಿ ಅನುದಾನವನ್ನು ಲೂಟಿ ಮಾಡುವ ಪ್ರಯತ್ನವನ್ನು ಸಚಿವರು ನಡೆಸುತ್ತಿದ್ದಾರೆ ಎಂದು ಶಾಸಕಸಂಜೀವ ಮಠಂದೂರು ಗಂಭೀರ ಆರೋಪ ಮಾಡಿದ್ದಾರೆ.
ಸಚಿವ ಖಾದರ್ ಏನು ತುಘಲಕ್, ಹಿಟ್ಲರ್ ರಾಜಕೀಯ ಮಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿರುವ ಅವರು, ವಸತಿ ಸಚಿವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ನಾವು ಹೋರಾಟಕ್ಕೆ ಸಿದ್ದ ಎಂದು ಶಾಸಕ ಸಂಜೀವ ಮಠಂದೂರು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಿಂದ ಅರ್ಧದಲ್ಲೇ ಹೊರ ನಡೆದ ಜಿಲ್ಲಾಧ್ಯಕ್ಷ:
ಕಸಾಯಿಖಾನೆಗೆ ಅನುದಾನ ನೀಡಿದ್ದಕ್ಕೆ ವಿರೋಧಗಳನ್ನು ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲೇ ಸುದ್ದಿಗೋಷ್ಠಿಯಲ್ಲಿ ಹಾಜರಾಗಿದ್ದ ಪತ್ರಕರ್ತರು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅವರಿಗೆ ಪ್ರಶ್ನೆಗಳ ಸುರಿ ಮಳೆಗೈದಿದ್ದಾರೆ. ಒಂದರ ಮೇಲೊಂದು ಪ್ರಶ್ನೆಗಳನ್ನು ಶಾಸಕರ ಮುಂದಿಟ್ಟಿದ್ದಾರೆ. ಪತ್ರಕರ್ತರ ಪ್ರಶ್ನೆಗಳಿಗೆ ಶಾಸಕರು ತಬ್ಬಿಬ್ಬಾಗಿದ್ದಾರೆ. ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಲಾಗದೆ ಜಿಲ್ಲಾಧ್ಯಕ್ಷರು, ಬೇರೆ ಕಾರ್ಯಕ್ರಮದ ನೆಪವೊಡ್ಡಿ ಸುದ್ದಿಗೋಷ್ಠಿಯಿಂದ ಹೊರ ನಡೆದ ಪ್ರಸಂಗ ನಡೆಯಿತು.
ಈ ವೇಳೆ ಪತ್ರಕರ್ತರು ಜಿಲ್ಲಾಧ್ಯಕ್ಷರಿಗೆ ವ್ಯಂಗ್ಯ ಪ್ರಶ್ನೆಗಳನ್ನು ಮುಂದಿಟ್ಟ ಪ್ರಸಂಗ ಕೂಡ ನಡೆಯಿತು. ಬಳಿಕ ಪತ್ರಕರ್ತರ ಪ್ರಶ್ನೆಗಳಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಉತ್ತರಿಸಿದರು.