ನವದೆಹಲಿ,ಅ 09(MSP): ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ, ನಟಿ , ಮಾಜಿ ಸಂಸದೆ ರಮ್ಯಾಗೆ ಇದೀಗ ಕಂಟಕ ಎದುರಾಗಿದೆ. ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ, ನವದೆಹಲಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ರಮ್ಯಾ ಅವರ ಹೆಸರನ್ನು ಕೂಡಾ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಐಟಿ ಸೆಲ್ ನಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ ಹಿನ್ನಲೆಯಲ್ಲಿ ಸಂತ್ರಸ್ತೆ ಮಹಿಳೆಗೆ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ನಿಂದಿಸಿದ್ದಾರೆ ಎಂದು ದೂರುದಾರೆ ಗಂಭೀರ ಆರೋಪ ಮಾಡಿದ್ದಾರೆ. ಲೈಂಗಿಕ ಕಿರುಕುಳ ನೀಡಿದ್ದ ಚಿರಾಗ್ ಪಟ್ನಾಯಕ್ ಎಂಬ ವ್ಯಕ್ತಿ ಕಾಂಗ್ರೆಸ್ ನಾಯಕಿ ರಮ್ಯಾರ ಆಪ್ತನಾಗಿದ್ದ ಕಾರಣ ಆತನನ್ನು ರಕ್ಷಿಸುವ ಕೆಲಸವನ್ನು ರಮ್ಯಾ ಮಾಡಿದ್ದರು. ತಾನೂ ದೂರು ನೀಡಿದ್ದರೂ ತನ್ನ ಆಪ್ತನ ಬೆಂಬಲಕ್ಕೆ ರಮ್ಯಾ ನಿಂತಿದ್ದರು ಎಂದು ಸಂತ್ರಸ್ತೆ ಯುವತಿ ದೂರಿದ್ದಾರೆ.
ಮಹಿಳೆಯ ಆರೋಪದಂತೆ ಚಾರ್ಜ್ ಶೀಟ್ ನಲ್ಲಿ ರಮ್ಯಾ ಹೆಸರು ಉಲ್ಲೇಖವಾಗಿದೆ. ಜುಲೈ ತಿಂಗಳ 3ರಂದು ದೆಹಲಿ ಪೊಲೀಸರಿಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದು ಮಹಿಳೆಯ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ಚಿರಾಗ್ ಪಟ್ನಾಯಕ್ ನ್ನು ಬಂಧಿಸಿದ್ದರು. 39 ವರ್ಷದ ಚಿರಾಗ್ ಪಟ್ನಾಯಕ್ ಎಂಬಾತ ಕೆಲಸದ ವೇಳೆ ಹಿಂದಿನಿಂದ ಬಂದು ತನ್ನನ್ನು ಅಶ್ಲೀಲವಾಗಿ ಮುಟ್ಟುವುದು, ಅಶ್ಲೀಲ ಸನ್ನೆ ಮಾಡುವುದು ಸಹಿತ ಇನ್ನಿತರ ಅಸಭ್ಯ ವರ್ತನೆಗಳನ್ನು ಮಾಡುತ್ತಿದ್ದ” ಎಂದು ಸಂತ್ರಸ್ತ ಮಹಿಳೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಾದ ನಂತರವೂ ತನ್ನ ಆಪ್ತನ ಚಿರಾಗ್ ಪರವಾಗಿ ರಮ್ಯಾ ನಿಂತ ಕಾರಣ ಆತನ ಬಂಧನ ವಿಳಂಬವಾಗಿತ್ತು ಎಂಬ ಆಕ್ಷೇಪಗಳು ಕೇಳಿಬಂದಿತ್ತು.