ಮಂಗಳೂರು, ಅ 09(MSP): ಕಂಬಳ ಕ್ರೀಡೆಯ ಬಗ್ಗೆ ಮತ್ತೆ ಚಕಾರವೆತ್ತಿದ್ದ ಪೇಟಾ ಸಂಸ್ಥೆ, ಕಂಬಳ ಕ್ರೀಡೆಗೆ ಅನುಮತಿ ನೀಡಿ ಪ್ರಾಣಿ ಹಿಂಸೆ ಕಾಯ್ದೆಗೆ ರಾಜ್ಯ ಸರಕಾರ ತಿದ್ದುಪಡಿ ತಂದಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ನಡೆಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾ. ಅಬ್ದುಲ್ ನಜೀರ್ ನಿರಾಕರಿಸಿದ್ದಾರೆ.
ಪ್ರಾಣಿ ಹಿಂಸೆ ಮಾಡುವ ಕಂಬಳ ಕ್ರೀಡೆಗೆ ಅನುಮತಿ ನೀಡಿರುವುದು ಆಕ್ಷೇಪಾರ್ಹ. ಈ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಪೇಟಾ ಸಂಸ್ಥೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಅ.8 ರ ಸೋಮವಾರದಂದು ಪ್ರಕರಣದ ವಿಚಾರಣೆ ನಿಗದಿಯಾಗಿತ್ತು. ಆದರೆ ವಿಚಾರಣೆಗೆ ನ್ಯಾ. ಅಬ್ದುಲ್ ನಜೀರ್ ಹಿಂದೇಟು ಹಾಕಿದ್ದಾರೆ. ಈ ಹಿಂದೆ ಹೈಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಾನು ಕಂಬಳಕ್ಕೆ ಅನುಮತಿ ನೀಡಿ ತೀರ್ಪು ನೀಡಿದ್ದೆ. ಈ ತೀರ್ಪು (ಪೇಟಾ)ನಿಮ್ಮ ಬೇಡಿಕೆಯ ವಿರುದ್ದವಾಗಿದೆ. ಹೀಗಾಗಿ ಮತ್ತೊಮ್ಮೆ ನಾನು ಇದೇ ಪ್ರಕರಣವನ್ನು ವಿಚಾರಣೆ ನಡೆಸಲಾರೆ ಎಂದರು. ಇದಕ್ಕೆ ದ್ವನಿಗೂಡಿಸಿದ ಮತ್ತೊಬ್ಬ ನ್ಯಾ. ಕುರಿಯನ್ ಜೋಸೆಫ್ ವಿಚಾರಣೆಯನ್ನು ಮುಂದೂಡಿದರು.
ಕಂಬಳ ಕ್ರೀಡೆಗೆ ಅನುಮತಿ ನೀಡಿ ಪ್ರಾಣಿ ಹಿಂಸೆ ಕಾಯ್ದೆಗೆ ರಾಜ್ಯ ಸರಕಾರ ತಿದ್ದುಪಡಿ ತಂದು ಕಂಬಳ ಕ್ರೀಡೆಯ, ಹೋರಿ ಮತ್ತು ಎತ್ತಿನಗಾಡಿ ಓಟಗಳಿಗೆ ರಾಜ್ಯದಲ್ಲಿ ಕಾನೂನು ಮಾನ್ಯತೆ ನೀಡಲೆಂದು ರಾಜ್ಯ ಸರ್ಕಾರ ಪ್ರಾಣಿ ಹಿಂಸೆ ತಡೆ ಕಾಯ್ದೆ 2017 ಯನ್ನು ತಂದಿತ್ತು. ಈ ತಿದ್ದುಪಡಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ಪೆಟಾ ವಾದಿಸುತ್ತಿದ್ದು, ಇದನ್ನು ರದ್ದುಗೊಳಿಸಿ ಎಂದು ಪೇಟಾ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿತ್ತು.