ಕಾರ್ಕಳ, ಅ. 09(MSP): ಬೆಳ್ಮಣ್ಣಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಜ್ಯ ಹೆದ್ದಾರಿ ಟೋಲ್ ನಿರ್ಮಾಣ ಬಿಜೆಪಿಯ ಕೊಡುಗೆಯಾಗಿದೆ. ಅಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಒಟ್ಟು 19 ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಈ ರಸ್ತೆಗಳ ಪೈಕಿ ಪಡುಬಿದ್ರೆ ಕಾರ್ಕಳ ರಾಜ್ಯ ಹೆದ್ದಾರಿಯೂ ಒಳಗೊಂಡಿದೆ. ಅಂದಿನ ಲೋಕೋಪಯೋಗಿ ಸಚಿವರ ಸಿ.ಎಂ ಉದಾಸಿ ಕಾಮಗಾರಿಗೆ ಚಾಲನೆ ನೀಡಿದ್ದು, ಕಾಮಗಾರಿ ಆರಂಭಕ್ಕೂ ಮುನ್ನವೇ ಟೋಲ್ ಸಂಗ್ರಹಕ್ಕೆ ಬಿಜೆಪಿ ಸರಕಾರ ಒಡಂಬಡಿಕೆ ಮಾಡಿತ್ತು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನೇಮಿರಾಜ ರೈ ಆರೋಪಿಸಿದ್ದಾರೆ.
ಅವರು ಸೋಮವಾರ ಕಾರ್ಕಳದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ರಾಜ್ಯದ 19 ರಾಜ್ಯ ಹೆದ್ದಾರಿಗಳ ನಿರ್ಮಾಣಕ್ಕೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್(ಎಡಿಬಿ)ನಿಂದ ಶೇ 6ರ ಬಡ್ಡಿದರದಲ್ಲಿ ಸಾಲ ಪಡೆಯಲಾಗಿತ್ತು, ಈ ಪೈಕಿ ಪಡುಬಿದ್ರೆ ಕಾರ್ಕಳ ಹೆದ್ದಾರಿಗೆ 61 ಕೋ.ರೂ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲಾಗಿತ್ತು. ಕಾಮಗಾರಿಯ ಶಿಲಾನ್ಯಾಸವನ್ನು ಅಂದಿನ ಲೋಕೋಪಯೋಗಿ ಸಿ.ಎಂ ಉದಾಸಿ ನೆರವೇರಿಸಿದ್ದು ಉಸ್ತುವಾರಿ ಸಚಿವ ವಿ.ಎಸ್ ಆಚಾರ್ಯ, ಕಾರ್ಕಳ ಶಾಸಕ ಗೋಪಾಲ ಭಂಡಾರಿ ಹಾಜರಿದ್ದರು.ಅಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಕಾರ್ಕಳದಲ್ಲಿ ನಡೆದ ಅಭಿವೃದ್ದಿ ಕಾಮಗಾರಿಗಳು ತನ್ನದೆಂದು ಬೆನ್ನುತಟ್ಟಿಕೊಳ್ಳುತ್ತಿದ್ದ ಅಂದಿನ ಮಾಜಿ ಪ್ರಸ್ತುತ ಹಾಲಿ ಶಾಸಕ ಸುನಿಲ್ಕುಮಾರ್ಗೆ ಟೋಲ್ ಒಡಂಬಡಿಕೆ ಗಮನಕ್ಕೆ ಬಾರದೇ ಹೋಗಿರುವುದು ವಿಪರ್ಯಾಸವೆಂದು ವ್ಯಂಗ್ಯವಾಡಿದರು.
ರಾಜಕೀಯ ಲಾಭಕ್ಕೆ ಪ್ರತಿಭಟನಾ ವೇದಿಕೆ : ಟೋಲ್ ಒಡಂಬಡಿಕೆ ವಿಚಾರ ಎಲ್ಲಾ ಮಟ್ಟದ ಜನಪ್ರತಿನಿಧಿಗಳಿಗೆ ಈ ಮೊದಲೇ ತಿಳಿದಿದ್ದರೂ, ಟೋಲ್ ವಿರೋಧಿ ಪ್ರತಿಭಟನಾ ಸಭೆಯ ವೇದಿಕೆಯಲ್ಲಿ ಪಾಲ್ಗೊಂಡು ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದು ಇವರ ಹೋರಾಟದ ನಿಜಬಣ್ಣ ಬಯಲಾಗಿದೆ.
ಬೀದಿಗಿಳಿಯುವ ಬದಲು ಸರಕಾರದ ಮಟ್ಟದಲ್ಲಿ ಟೋಲ್ ರದ್ದತಿಗೆ ಪ್ರಯತ್ನಿಸಲಿ: ರಾಜಕೀಯ ಲಾಭಕ್ಕಾಗಿ ಜನಬೆಂಬಲವನ್ನು ಗಿಟ್ಟಿಸಲು ಜನರೊಂದಿಗೆ ಬೀದಿಗಿಳಿಯುವ ಬದಲು ಟೋಲ್ ನಿರ್ಮಾಣದಿಂದ ಜನರಿಗಾಗುವ ತೊಂದರೆಯ ಕುರಿತು ಸರಕಾರದ ಮಟ್ಟದಲ್ಲಿ ಗಮನಸೆಳೆದು ಅದನ್ನು ರದ್ದುಪಡಿಸುವ ಕುರಿತು ಪ್ರಾಮಾಣಿಕ ಪ್ರಯತ್ನ ನಡೆಸಲಿ ಎಂದು ಸವಾಲು ಹಾಕಿದರು. ಟೋಲ್ಗೇಟ್ ನಿರ್ಮಾಣದ ವಿಚಾರ ಸಂಸದರಿಗೆ ತಿಳಿದಿದ್ದರೂ ಅವರು ಯಾಕೆ ಈ ಯೋಜನೆಯ ಕುರಿತು ಯಾಕೆ ಮೌನ ವಹಿಸಿದ್ದಾರೆ? ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರೂ ಕೂಡ ಈ ಕುರಿತು ಯಾಕೆ ಚಕಾರ ಎತ್ತುತ್ತಿಲ್ಲ? ಎಂದು ಪ್ರಶ್ನಿಸಿದರು. ಜನವಿರೋಧಿ ಯೋಜನೆಗಳ ಕುರಿತು ದ್ವಂದ್ವ ನಿಲುವು ತಳೆಯುವ ಜನಪ್ರತಿನಿಧಿಗಳು ಅಮಾಯಕರನ್ನು ಬೀದಿಗೆ ತಳ್ಳುವುದು ಸಮಂಜಸವಲ್ಲ ಎಂದರು.