ಬಳ್ಳಾರಿ, ಅ 08(SM): ಪ್ರಧಾನಿ ನರೇದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕೆನ್ನುವುದು ನನ್ನ ಮುಂದಿನ ಗುರಿಯಾಗಿದೆ ಎಂದು ಶಾಸಕ ಶ್ರೀರಾಮುಲು ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಹಾಗೂ ಶ್ರೀರಾಮುಲು ಅಲ್ಲ. ಬದಲಾಗಿ, ಬಿಜೆಪಿ ವರ್ಸಸ್ ಕಾಂಗ್ರೆಸ್ ಆಗಿಯೇ ನಾವು ಚುನಾವಣೆಯನ್ನು ಎದುರಿಸುತ್ತೇವೆ. ಕಾಂಗ್ರೆಸನ್ನು ಸೋಲಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಅವರು ಮತ್ತೆ ಪ್ರಧಾನಿ ಆಗುತ್ತಾರೆ. ಬಳ್ಳಾರಿಯಲ್ಲಿಯೂ ಬಿಜೆಪಿ ಅಭ್ಯರ್ಥಿ ಜಯಗಳಿಸುತ್ತಾರೆ ಎಂದು ವಿಶ್ವಾಸದಿಂದ ನುಡಿದರು.
ಡಿಕೆ ಶಿವಕುಮಾರ್ ಅವರ ಬಳಿ ಎಷ್ಟೇ ಹಣ ಬಲ ಇದ್ದರೂ ಅದು ನಮಗೆ ಅಗತ್ಯವಿಲ್ಲ. ಆದರೆ ಚುನಾವಣೆಯಲ್ಲಿ ಮಾತ್ರ ನಾವೇ ಗೆಲ್ಲುತ್ತೇವೆ. ಡಿಕೆಶಿ ಪ್ರಭಾವಿ ಸಚಿವರಾಗಿರಬಹುದು, ಅವರ ಬಳಿ ಸರಕಾರವೇ ಇರಬಹುದು, ಆದರೆ ಬಿಜೆಪಿ ಶಕ್ತಿ ಯಾವತ್ತಿದ್ದರೂ ಬಿಜೆಪಿ ಪಕ್ಷಕ್ಕೆ ಮಾತ್ರ. ಅದು ಕಾಂಗ್ರೆಸ್ ಪಾಲಾಗಲು ಅಸಾಧ್ಯ ಎಂದರು.
ಲೋಕಸಭೆ ಉಪಚುನಾವಣೆಯಲ್ಲಿ ಶಿವಮೊಗ್ಗ ಹಾಗೂ ಬಳ್ಳಾರಿ ಎರಡೂ ಕಡೆಗಳಲ್ಲಿ ಪ್ರಚಾರದಲ್ಲಿ ತಾನು ಭಾಗವಹಿಸುವುದಾಗಿ ಶ್ರೀರಾಮುಲು ತಿಳಿಸಿದ್ದಾರೆ.