ನವದೆಹಲಿ, ಅ 08(SM): ಪಂಚ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ಘೋಷಣೆಯಾದ ಬೆನ್ನಲೇ ವಿವಿಧ ಮಾಧ್ಯಮಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳು ಆರಂಭಗೊಂಡಿದೆ. ಛತ್ತೀಸ್ಗಢ ವಿಧಾನಸಭೆ ಚುನಾವಣೆ ಕುರಿತು ಖಾಸಗಿ ವಾಹಿನಿಯೊಂದು ಸಮೀಕ್ಷೆ ನಡೆಸಿದೆ. ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಬಿಜೆಪಿ 47 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಲಿದೆ ಎಂದು ಸಮೀಕ್ಷೆ ಹೇಳಿದೆ.
ಸೋಮವಾರ ಸಂಜೆ ಸಮೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಛತ್ತೀಸ್ಗಢದ 90 ಸ್ಥಾನಗಳಿಗೆ ನವೆಂಬರ್ 12 ಮತ್ತು 20ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 11ರಂದು ಫಲಿತಾಂಶ ಪ್ರಕಟವಾಗಲಿದೆ.
2018ರ ಚುನಾವಣೆಯಲ್ಲಿ ಬಿಜೆಪಿ 47, ಕಾಂಗ್ರೆಸ್ 33, ಇತರರು 10 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಖಾಸಗಿ ವಾಹಿನಿಯ ಸಮೀಕ್ಷೆ ಹೇಳಿದೆ. ಬಿಜೆಪಿ 2013ರಲ್ಲಿ ಗಳಿಸಿದ ಸ್ಥಾನಕ್ಕಿಂತ 2 ಸ್ಥಾನ ಕಡಿಮೆ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 49, ಕಾಂಗ್ರೆಸ್ 39, ಇತರರು 2 ಸ್ಥಾನಗಳಲ್ಲಿ ಜಯಗಳಿಸಿದ್ದರು. ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಬಿಜೆಪಿ 2, ಕಾಂಗ್ರೆಸ್ 6 ಸ್ಥಾನ ಕಡಿಮೆಗಳಿಸಲಿದೆ ಎಂದು ಹೇಳಲಾಗಿದೆ.