ಕಾಸರಗೋಡು, ಅ 08(SM): ಪ್ರಸಿದ್ಧ ಯಕ್ಷಗಾನ ಕಲಾವಿದ ಪೆರಡಂಜಿ ಗೋಪಾಲಕೃಷ್ಣ ಭಟ್(70) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ರಾಜಾ ದಿಲೀಪ, ಲಂಕಾ ಪತನ, ವೀರೋಚನ ವಧೆ, ಸಹಿತ ಮೂರು ಯಕ್ಷಗಾನ ಪ್ರಸಂಗಗಳನ್ನು ನಾಟಕಗಳನ್ನೂ ರಚಿಸಿದ್ದಾರೆ. ಇದಲ್ಲದೆ, ಪ್ರಸಂಗ ಕರ್ತ, ಸ್ತ್ರೀ ವೇಷಧಾರಿ, ನಾಟಕಗಾರ, ಕಲಾ ಸಾಂಸ್ಕೃತಿಕ ಸಂಘಟಕರಾಗಿದ್ದರು. ಮಲಯಾಳ ಭಾಷೆಯಲ್ಲಿ ಮೊದಲ ಬಾರಿಗೆ ಯಕ್ಷಗಾನ ಪ್ರಸ್ತುತ ಪಡಿಸಿದವರು ಎಂಬ ಹೆಗ್ಗಳಿಕೆಯನ್ನು ಅವರು ಹೊಂದಿದ್ದಾರೆ.
ಮುಳಿಯಾರು ಕೋಟೂರಿನ ಪಾಣೂರಿನಲ್ಲಿ 1936ರಲ್ಲಿ ಜನಿಸಿದ ಅವರು ಯಕ್ಷಗಾನದಲ್ಲಿ ಸ್ತ್ರೀ ವೇಷಧಾರಿಯಾಗಿ ಹೆಸರು ಮಾಡಿದ್ದಾರೆ. ಎಳವೆಯಲ್ಲೇ ಯಕ್ಷಗಾನದತ್ತ ಆಕರ್ಷಿತರಾಗಿ ಸೋದರ ಮಾವ, ಯಕ್ಷಗಾನ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ ಮಾರ್ಗದರ್ಶನದಲ್ಲಿ ತನ್ನ ಪ್ರತಿಭೆಯನ್ನು ವಿಸ್ತರಿಸಿಕೊಂಡಿದ್ದಾರೆ. ಹವ್ಯಕ ಭಾಷೆಯಲ್ಲಿ ದಕ್ಷ ಯಜ್ಞ ಯಕ್ಷಗಾನ ಕೃತಿ ರಚಿಸಿದ್ದಾರೆ. ಪ್ರಸಿದ್ಧ ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದರು. ಮಲೆಯಾಳದಲ್ಲೂ ಪ್ರಸಂಗ ರಚಿಸುವ ಮೂಲಕ ಯಕ್ಷಗಾನವನ್ನು ಮಲೆಯಾಳ ಭಾಷೆಗೆ ಪರಿಚಯಿಸಿದ್ದಾರೆ. ಅಲ್ಲದೆ, ಯಕ್ಷ ತೂನೀರ ಸಂಸ್ಥೆಯ ಅಧ್ಯಕ್ಷರಾಗಿದ್ದರು.
ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಅಂಚೆ ಇಲಾಖೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.