ಮಂಗಳೂರು,ಅ 08 (MSP):ಕಸಾಯಿಖಾನೆಗೆ ಸ್ಮಾರ್ಟ್ ಸಿಟಿ ಅನುದಾನ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಯುಟಿ ಖಾದರ್ ಮಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರನ್ನು ಸ್ಮಾರ್ಟ್ ಸಿಟಿ ಮಾಡುವುದು ಕೇಂದ್ರ ಸರ್ಕಾರದ ಯೋಜನೆ. ಇದರ ಜಾರಿ ಪ್ರಕ್ರಿಯೆ ನಡೆಯುತ್ತಿದೆ. ಈ ಕುರಿತು ನಾನು ಸಲಹೆ ನೀಡಿದ್ದೇನೆ ಎಂದಿದ್ದಾರೆ.
ಮಂಗಳೂರಿನ ಕಸಾಯಿಖಾನೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಈ ಕುರಿತು ವರ್ಷದ ಹಿಂದೆ ಬಿಜೆಪಿಯವರೇ ಹೇಳಿದ್ದರು. ಆದರೆ ಈಗ ಅವರೇ ಆರೋಪ ಮಾಡುತ್ತಿರುವುದು ಹಾಸ್ಯಸ್ಪದ ಎಂದರು. ಇನ್ನು ಸ್ಮಾರ್ಟ್ ಸಿಟಿ ಅಂದರೆ ಎಲ್ಲವೂ ಸ್ವಚ್ಚ, ಸುಸಜ್ಜಿತವಾಗಿರಬೇಕು. ನಮ್ಮ ಮನೆ ಕಸ ಹೆಕ್ಕಿದರೆ ಮಾತ್ರ ಸ್ವಚ್ಚ ನಗರವಾಗಲ್ಲ. ತಿನ್ನುವಂತಹ ಮಾಂಸ ಹೈಜೇನಿಕ್ ಆಗಿರಬೇಕು. ಸ್ವಚ್ಚತೆ ಇಲ್ಲದ ಪರಿಸರ ನಮಗೆ ಬೇಕೇ..? ಬಿಜೆಪಿಯ ಕೆಲ ನಾಯಕರಿಗೆ ಅನುಭವ ಕಡಿಮೆ ಇತ್ತು. ಆದರೆ, ಇಷ್ಟು ಕಡಿಮೆ ಅನುಭವ ಇದೆ ಎಂಬುದು ಈಗ ಗೊತ್ತಾಯಿತು ಎಂದು ವ್ಯಂಗ್ಯವಾಡಿದರು.
ಇನ್ನು ಸ್ಮಾರ್ಟ್ ಸಿಟಿ ಯೋಜನೆಯ ಬೋರ್ಡ್ ಕಮಿಟಿಯಲ್ಲಿ ಬಿಜೆಪಿ ಸದಸ್ಯರಿದ್ದಾರೆ. ಸ್ಮಾರ್ಟ್ ಸಿಟಿ ಅಡಿಯಲ್ಲಿ ಕಸಾಯಿಖಾನೆಗೆ ಅನುದಾನ ಬೇಡ ಅನ್ನುವುದಾದರೆ ಸ್ವತಃ ದಕ್ಷಿಣ ಕನ್ನಡ ಸಂಸದರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ ಎಂದು ಸವಾಲೆಸೆದರು. ಪ್ರತಿಯೊಂದು ವಿಚಾರದಲ್ಲಿ ರಾಜಕೀಯ ಸಲ್ಲದು. ಭಾವನೆಗಳನ್ನು ಕೆರಳಿಸುವ ಕೆಲಸ ಜನಪ್ರತಿನಿಧಿಗಳು ಮಾಡಬಾರದು. ದೂರದೃಷ್ಟಿಯಿಂದ ನಾನು ಸಲಹೆ ನೀಡಿದ್ದೆ. ಇಲ್ಲಸಲ್ಲದ ಆರೋಪ ಹೊರಿಸುವವರು ಕೇಂದ್ರಕ್ಕೆ ಪತ್ರ ಬರೆಯಲಿ.
ತಾಕತ್ತಿದ್ದರೆ ಈ ಯೋಜನೆ ನಿಲ್ಲಿಸಲು ಮನವಿ ಮಾಡಲಿ. ಸ್ಮಾರ್ಟ್ ಸಿಟಿಯಲ್ಲಿ ಗೋಶಾಲೆ ಅಭಿವೃದ್ಧಿಗೆ ಮನವಿ ಮಾಡಲಿ. ಆರೋಪ ಹೊರಿಸಿದ ನಂತರವೂ ಕೇಂದ್ರಕ್ಕೆ ಯಾಕೆ ಹೇಳಿಲ್ಲ..? ಸ್ಮಾರ್ಟ್ ಸಿಟಿ ಅಂತಾ ಬಾಯಲ್ಲಿ ಹೇಳಿದರೇ ಸಾಕೇ..? ಎಂದು ಸಚಿವ ಯು.ಟಿ. ಖಾದರ್ ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮೇಯರ್ ಬಾಸ್ಕರ್ ಮೊಯ್ಲಿ, ಉಪಮೇಯರ್ ಮಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.