ಬೆಳ್ತಂಗಡಿ, ಜೂ.24 (DaijiworldNews/HR): ಕೊರೊನಾ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಪತಿ ಹಾಗೂ ಪತ್ನಿ 24 ಗಂಟೆಯ ಅಂತರದಲ್ಲಿ ಮೃತಪಟ್ಟ ಘಟನೆ ನೆರಿಯ ಗ್ರಾಮದಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ನೆರಿಯ ಗ್ರಾಮದ ಪರಂದಾಡಿ ನಿವಾಸಿ ಸಾರಮ್ಮ (58) ಅವರು ವೆನ್ಲಾಕ್ ಆಸ್ಪತ್ರೆಯಲ್ಲಿ ಜೂ. 22ರಂದು ಮೃತಪಟ್ಟರೆ, ಅವರ ಪತಿ ಇಬ್ರಾಹಿಂ (68) ಜೂ. 23ರಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಗಂಡ ಹೆಂಡತಿ ಇಬ್ಬರಿಗೂ ಜೂ. 19ರಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಸಾರಮ್ಮ ಅವರನ್ನು ಮೊದಲು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದ್ದು, ಬಳಿಕ ಪತಿ ಇಬ್ರಾಹಿಂ ಹೃದಯ ಸಂಬಂಧಿ ಕಾಯಿಲೆ ತೀವ್ರಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಇನ್ನು ಕಳೆದ ಕೆಲವು ದಿನಗಳಿಂದ ಇವರಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಸಾರಮ್ಮ ಮಂಗಳವಾರ ಮೃತಪಟ್ಟರೆ ಪತಿ ಇಬ್ರಾಹಿಂ ಬುಧವಾರ ಸಾವನ್ನಪ್ಪಿದ್ದಾರೆ.
ಇವರಿಬ್ಬರ ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.