ಬೆಂಗಳೂರು, ಅ 08 (MSP): ನಾನೇನು ಹಿಂದೂ ವಿರೋಧಿ ಅಲ್ಲ. ಅದರೂ ನನಗೆ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗಿದೆ ಯಾಕೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬೆಂಗಳೂರಿನ ಓಕಳೀಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಹಿಂದೂ ವಿರೋಧಿ ಎಂಬ ಪದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸೋಲಿಸಲು ಬಿಜೆಪಿಯವರು ಸುಳ್ಳಿನ ಕಂತೆಯನ್ನೇ ಹೆಣೆದಿದ್ದರು. ಕರಾವಳಿ ಭಾಗದಲ್ಲಿಯಂತೂ ಬಿಜೆಪಿಯವರು ನನ್ನ ವಿರುದ್ದ ಕುತಂತ್ರದ ಮಾತುಗಳನ್ನಾಡಿದ್ದಾರೆ. ಮನೆಯ ಮಕ್ಕಳು ಸುರಕ್ಷಿತವಾಗಿ ಮನೆಗೆ ಹಿಂತಿರುಗಬೇಕಾದರೆ ಬಿಜೆಪಿಗೆ ಮತ ಹಾಕಿ ಗೆಲ್ಲಿಸಿ . ದೇವಸ್ಥಾನಗಳಲ್ಲಿ ಪೂಜೆ- ಪುನಸ್ಕಾರಗಳು ಮುಂದುವರಿಯಬೇಕಿದ್ದರೆ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸಿ ಎಂದು ಪ್ರಚಾರ ಮಾಡಿದ್ದರು. ನನ್ನನ್ನು ಅಪಪ್ರಚಾರದಿಂದ ಸೋಲಿಸಿದರು.ಜಾತಿ ಧರ್ಮ ಎನ್ನುವುದು ಅಫೀಮು ಇದ್ದಂತೆ. ಇದನ್ನು ಲೋಕಸಭೆಯ ಚುನಾವಣೆಯಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದು ಸಿದ್ದರಾಮಯ್ಯ ನುಡಿದರು.
ನನ್ನ ಹೆಸರಿನಲ್ಲಿ ರಾಮನಿದ್ದಾನೆ, ನನ್ನ ತಂದೆಯ ಹೆಸರು ಸಿದ್ದರಾಮೇಗೌಡ. ನಮ್ಮ ಮನೆಯದೇವರು ಸಿದ್ದರಾಮೇಶ್ವರ. ನನ್ನೂರು ಸಿದ್ದರಾಮನಹುಂಡಿ. ಹೀಗಿರುವಾಗ ನಾನು ಹೇಗೆ ಹಿಂದೂ ವಿರೋಧಿಯಾಗುತ್ತೇನೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ,ಮಾಜಿ ಸಭಾಪತಿ ವೀರಣ್ಣ ಮತ್ತೀಕಟ್ಟಿ, ಜಿ.ಸಂಪತ್, ವಿ.ಶಿವಪ್ರಕಾಶ್, ರಾಜ್ ಕಾರ್ತಿಕ್ ಮತ್ತಿತರು ಉಪಸ್ಥಿತರಿದ್ದರು.