ಮಂಗಳೂರು, ಅ 08 (MSP): ಸ್ಮಾರ್ಟ್ ಸಿಟಿಯ ಅನುದಾನದಲ್ಲಿ 15 ಕೋಟಿ ರೂಪಾಯಿ ಹಣವನ್ನು ಕುದ್ರೋಳಿಯಲ್ಲಿರುವ ಕಸಾಯಿಖಾನೆಗೆ ಘೋಷಣೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ವಿರುದ್ದ ಸಂಸದ ನಳಿನ್ ಕುಮಾರ್ ಕಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬಿಡುಗಡೆ ಮಾಡಿದ ಅನುದಾನದ ಹಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು 15 ಕೋಟಿ ರೂಪಾಯಿಯನ್ನು ಕಸಾಯಿಖಾನೆಗೆಯೇ ಮೀಸಲಿರಿಸಿದ್ದು ದುರಂತ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಂಗಳೂರು ನಗರದಲ್ಲಿ ಅನುಷ್ಠಾನಗೊಳ್ಳುತ್ತಿರುವ ಸ್ಮಾರ್ಟ್ ಸಿಟಿ ಯೋಜನೆ ಸಂಪೂರ್ಣ ಗೊಂದಲಮಯವಾಗಿದ್ದು, ಈ ಯೋಜನೆಯ ಕೋಟ್ಯಂತರ ರೂಪಾಯಿ ದುರುಪಯೋಗವಾಗುತ್ತಿದೆ ಎಂದರು.
ದೇಶದಲ್ಲಿರುವ ನಗರ ಹಾಗು ಪಟ್ಟಣಗಳ ಸಂಪೂರ್ಣ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಗೊಳಿಸಿದೆ. ಆದರೆ ಮಂಗಳೂರು ನಗರದ ಸಮಗ್ರ ಅಭಿವೃದ್ದಿಯನ್ನು ಮರೆತಂತಿರುವ ಸಚಿವರು ಕಸಾಯಿಖಾನೆಯನ್ನು ಮಾತ್ರ ಅಭಿವೃದ್ದಿಪಡಿಸುತ್ತಿದ್ದಾರೆ. ಈ ಯೋಜನೆಯಡಿ ಹಣ ದುರುಪಯೋಗವಾಗುವ ಸಾಧ್ಯತೆ ಇರುವುದರಿಂದ ರಾಜ್ಯ ಸರ್ಕಾರ ತಕ್ಷಣ ಸ್ಮಾರ್ಟ್ ಸಿಟಿ ಯೋಜನೆಗೆ ಪೂರ್ಣ ಪ್ರಮಾಣದ ಎಂಡಿ ಹಾಗೂ ಸಲಹಾ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.