ನವದೆಹಲಿ, ಅ 08 (MSP): ಕರ್ನಾಟಕದ ಮಂಗಳೂರು ಸೇರಿದಂತೆ ದೇಶದ ಐದು ನಗರಗಳಲ್ಲಿ ಹೊಸದಾಗಿ ಕ್ಷಿಪ್ರ ಕಾರ್ಯಪಡೆ ನೆಲೆಗಳು ಸ್ಥಾಪನೆಯಾಗಲಿವೆ. ಕೇಂದ್ರ ಸರ್ಕಾರವು ಕಳೆದ ಜನವರಿಯಲ್ಲಿಯೇ ಆರ್ ಎ ಎಫ್ ನ ಐದು ಹೊಸ ಬೆಟಾಲಿಯನ್ ಗಳಿಗೆ ಅನುಮೋದನೆ ನೀಡಿತ್ತು. ಈಗ ಈ ಬೆಟಾಲಿಯಾನ್ ಯಾವ್ಯಾವ ಸ್ಥಳಗಳಲ್ಲಿ ಸ್ಥಾಪನೆ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರ ಹೊರಹಾಕಿದೆ. ಹೀಗಾಗಿ ಈ 5 ಕ್ಷಿಪ್ರ ಕಾರ್ಯಪಡೆ ನೆಲೆ ಸೇರಿಸಿದರೆ ದೇಶದಲ್ಲಿ ಒಟ್ಟಾರೆ 15 ನೆಲೆಗಳು ಸ್ಥಾಪನೆಯಾದಂತೆ ಆಗುತ್ತದೆ.
ಮಂಗಳೂರು ರಾಜ್ಯದಲ್ಲೇ ಪ್ರಥಮ ಆರ್ ಎ ಎಫ್ ನೆಲೆ. ಮಂಗಳೂರು ಅಲ್ಲದೆ ಜೈಪುರ , ವಾರಣಾಸಿ, ಬಿಹಾರದ ಹಾಜೀಪುರ ಮತ್ತು ಹರಿಯಾಣದ ನುಹ್ ನಲ್ಲಿ ಹೊಸದಾಗಿ ನೆಲೆಗಳು ಸ್ಥಾಪನೆಯಾಗಲಿದೆ. ಇದರ ಕಚೇರಿ ಸ್ಥಾಪನೆಗಾಗಿ ಎರಡು ವರ್ಷಗಳ ಹಿಂದೆಯೇ ನಗರದ ಹೊರವಲಯದಲ್ಲಿರುವ ಬಜಪೆ ಮತ್ತು ಮರವೂರಿನಲ್ಲಿ ಜಾಗವನ್ನು ಗುರುತಿಸಿ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು.
ಆರ್ ಎ ಎಫ್ ಅಂದರೆ ರ್ಯಾಪಿಡ್ ಆಕ್ಷನ್ ಫೋರ್ಸ್ ಅಥವಾ ಕ್ಷಿಪ್ರ ಕಾರ್ಯಪಡೆ ಎಂದು ಕರೆಸಿಕೊಳ್ಳುವ ಇದು ಕೇಂದ್ರ ಮೀಸಲು ಪೊಲೀಸ್ ಪಡೆಯ ಭಾಗ. ಆರ್ ಎ ಎಫ್ ನ ಪ್ರತಿ ನೆಲೆಯಲ್ಲೂ ಒಂದು ಸಾವಿರ ಯೋಧರ ತಂಡವಿರುತ್ತದೆ. ಇವರ ಬಳಿ ಆಕ್ಷನ್ ಗನ್ ಹೊಗೆ ಚಿಮ್ಮಿಸುವ ಗ್ರೇನೆಡ್ ಸೇರಿ ಹಿಂಸಾಚಾರ ನಿಯಂತ್ರಣಕ್ಕೆ ಬೇಕಾದ ಉಪಕರಣವಿರುತ್ತದೆ.
ಆರ್ ಎ ಎಫ್ ಕೆಲಸವೇನು?
ರ್ಯಾಪಿಡ್ ಆಕ್ಷನ್ ಫೋರ್ಸ್ (ಆರ್ ಎ ಎಫ್) ಇರುವುದೇ ಹಿಂಸಾಚಾರ ಮತ್ತು ಗುಂಪು ಘರ್ಷಣೆಗಳ ನಿಯಂತ್ರಣ ಮಾಡುವುದು. ನೀಲಿ ಬಣ್ಣದಿಂದ ಕೂಡಿದ ಸಮವಸ್ತ್ರ ಧರಿಸುವ ಈ ಪಡೆ ಹಿಂಸಾಚಾರ ನಿಯಂತ್ರಿಸುವ ವಿಚಾರದಲ್ಲಿ ಪರಿಣಿತರಾಗಿರುತ್ತಾರೆ. ಇದಲ್ಲದೆ ನೈಸರ್ಗಿಕ ವಿಕೋಪದಗಳಾದ ಭೂಕಂಪ, ಪ್ರವಾಹ, ಚಂಡಮಾರುತ ಸಂದರ್ಭದಲ್ಲೂ ಮಾನವೀಯ ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾರ್ಯಪಡೆ ಜತೆಯಾಗಿ ಕೆಲಸ ನಿರ್ವಹಿಸುತ್ತದೆ.