ಕಾಸರಗೋಡು, ಅ 08(SM): ಮಹಿಳೆ ಸಹಿತ 8 ಮಂದಿ ಸಿಪಿಎಂ ಕಾರ್ಯಕರ್ತರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಮಂಜೇಶ್ವರದ ಪಾವೂರು ಸಮೀಪದ ಪೊಯ್ಯೆಯಲ್ಲಿ ನಡೆದಿದೆ. ಹಲ್ಲೆಯಿಂದ ಸಿಪಿಎಂ ಮಂಜೇಶ್ವರ ವಲಯ ಕಾರ್ಯದರ್ಶಿ ಡಿ. ಬೂಬ, ಅವರ ಪತ್ನಿ ಹರಿಣಾಕ್ಷಿ , ಸಿಪಿಎಂ ವರ್ಕಾಡಿ ಸ್ಥಳೀಯ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್, ಸದಸ್ಯ ಮಹೇಶ್, ಕಾರ್ಯಕರ್ತರಾದ ಅಕ್ಷಯ್ ಕುಮಾರ್, ದೀಕ್ಷಿತ್, ನಿತಿನ್ ಮತ್ತು ಚರಣ್ ರಾಜ್ ಗಾಯಗೊಂಡಿದ್ದಾರೆ.
ಸಿಪಿಎಂ ಕಾರ್ಯಕರ್ತರ ಮೇಲೆ ಬೈಕ್ ಗಳಲ್ಲಿ ಬಂದ ತಂಡವು ಹಲ್ಲೆ ನಡೆಸಿದೆ. ಗಾಯಾಳುಗಳನ್ನು ಕುಂಬಳೆಯಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಯ್ಯೆಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮರಳುತ್ತಿದ್ದ ಸಂದರ್ಭ ಬೈಕ್ ಗಳಲ್ಲಿ ಬಂದ ತಂಡ ಹಲ್ಲೆ ನಡೆಸಿದೆ. ಹಲ್ಲೆ ನಡೆಸಿದವರು ಸಂಘ ಪರಿವಾರ ಕಾರ್ಯಕರ್ತರು ಎಂದು ಸಿಪಿಎಂ ಆರೋಪಿಸಿದೆ. ಘಟನಾ ಸ್ಥಳದಲ್ಲಿ ಮಂಜೇಶ್ವರ ಪೊಲೀಸರು ಎಚ್ಚರಿಕಾ ಕ್ರಮವಾಗಿ ಭದ್ರತೆಯನ್ನು ಕೈಗೊಂಡಿದ್ದಾರೆ.
ಇನ್ನು ಕೃತ್ಯವನ್ನು ಖಂಡಿಸಿ ಇಂದು ಸಂಜೆ ಮೂರು ಗಂಟೆಗೆ ಮಜಿಬೈಲ್ ನಲ್ಲಿ ಸಿಪಿಎಂ ವತಿಯಿಂದ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿದೆ.