ಮಂಗಳೂರು, ಅ 07(SM): ಗಂಜಿಮಠ ಸಮೀಪದ ಮುಹಮ್ಮದ್ ಸಮೀರ್(35) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಪತ್ನಿ ಫಿರ್ದೌಸ್ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಅವರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ದೇವತಾನಪಟ್ಟಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಕುಮಾರ್ ಸ್ಪಷ್ಟಪಡಿಸಿದ್ದಾರೆ.
ಆರೋಪಿಗಳನ್ನು ಬೆಂಗಳೂರು-ತಮಿಳುನಾಡು ಗಡಿ ಪ್ರದೇಶವಾದ ಹೊಸೂರು ಠಾಣೆ ವ್ಯಾಪ್ತಿಯ ಹೊಸೂರು ಬಸ್ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ವಿಚಾರಣೆ ನಡೆಸಿದ ಪೊಲೀಸರು ಆರೋಪಿಗಳಿಂದ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ಸಂದರ್ಭ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸಮೀರ್ನನ್ನು ಸೆ.15ರಂದು ರಾತ್ರಿ ಚಾಕುವಿನಿಂದ ತಿವಿದು ಕೊಲೆಗೈಯಲಾಗಿದೆ. ಬಳಿಕ ಕೊಡೈಕೆನಾಲ್ನಲ್ಲಿ ಮೃತದೇಹವನ್ನು ಬಿಸಾಡಿದ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಫಿರ್ದೌಸ್, ಮತ್ತಾಕೆಯ ಪ್ರಿಯಕರ ಆಸಿಫ್ ನನ್ನು ವಶಕ್ಕೆ ಪಡೆದ ಹೊಸೂರು ಠಾಣೆಯ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಬಳಿಕ ಸಮೀರ್ ಮೃತದೇಹ ಪತ್ತೆಯಾಗಿದ್ದ ದೇವತಾನಪಟ್ಟಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.