ಬೆಳ್ಮಣ್, ಅ 07(SM): ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿ 1ರಲ್ಲಿ ನಿರ್ಮಿಸಲುದ್ದೇಶಿಸಿದ ಟೋಲ್ ಗೇಟ್ ವಿರೋಧಿಸಿ ಬೆಳ್ಮಣ್ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ರವಿವಾರ ನಡೆದ ಪ್ರತಿಭಟನೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಸುಮಾರು ೬ ಸಾವಿರಕ್ಕೂ ಮಿಕ್ಕಿ ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮತನಾಡಿದ ಕೇಮಾರುವಿನ ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಯಾವುದೇ ಮೂಲಭೂತ ಸೌಕರ್ಯವನ್ನು ನೀಡಬೇಕಾದ ಸರಕಾರ ನಮ್ಮ ತೆರಿಗೆಯಿಂದಲೇ ನಿರ್ಮಾಣಗೊಂಡ ರಸ್ತೆಗಳಿಗೆ ನಮ್ಮ ಕೈಯಿಂದಲೇ ಸುಂಕ ವಸೂಲಿ ಮಾಡ ಹೊರಟಿರುವುದೂ ಖೇದಕರ ಎಂದರು. ಕಾರ್ಕಳ ಭಾಗದಲ್ಲಿರುವ ವಿಶ್ವವಿಖ್ಯಾತಿಯನ್ನು ಹೊಂದಿದ ಧಾರ್ಮಿಕ ಕೇಂದ್ರಗಳಿಗೆ ಹೋಗಬೇಕಾದರೂ ಮುಂದೆ ಈ ರಸ್ತೆಯಲ್ಲಿ ಸುಂಕ ಪಾವತಿಸಿ ಸಾಗಬೇಕಾದದು ನಮ್ಮ ದುರದೃಷ್ಠವಾಗಿದೆ. ಪಕ್ಷ, ಜಾತಿ, ಮತ ಬೇಧಗಳಿಲ್ಲದೇ ನಡೆಯುತ್ತಿರುವ ಈ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತೇನೆ ಎಂದರು.
ಇನ್ನು ಹೋರಾಟ ಸಮಿತಿಯ ಸಂಚಾಲಕ ಸುಹಾಸ್ ಹೆಗ್ಡೆ ನಂದಳಿಕೆ ಮಾತನಾಡಿ, ಈಗ ಪ್ರಾರಂಭಿಸಿದ ಪ್ರತಿಭಟನೆ ಶಾಂತಿಯುತವಾದುದು. ಈ ಹೋರಾಟಕ್ಕೆ ನ್ಯಾಯ ಸಿಗದೇ ಹೋದಲ್ಲಿ ನಮಗೆ ಕೋಲು ಹಿಡಿಯಲೂ ತಿಳಿದಿದೆ, ಎತ್ತುಗಳನ್ನು ಓಡಿಸಿಯೂ ತಿಳಿದಿದೆ. ಮುಂದೆ ಬೆತ್ತ ಹಿಡಿಯುವ ಪರಿಸ್ಥಿತಿಯೂ ಬಂದೀತೆಂದು ಎಚ್ಚರಿಕೆ ನೀಡಿದರು. ಕೂಡಲೇ ಪ್ರಸ್ತಾವಣೆಯನ್ನು ಕೈ ಬಿಡಬೇಕು ಇಲ್ಲವಾದಲ್ಲಿ ಪ್ರತಿಭಟನೆ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದರು.
ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಮೂಲ ಒಪ್ಪಂದಗಳಿಲ್ಲದೆ ಟೋಲ್ ಅಳವಡಿಕೆ ಮುಂದಾಗಿರುವುದು ಖಂಡನೀಯ. ಒಂದು ರಸ್ತೆ ನಿರ್ಮಾಣಗೊಂಡು ೪ ವರ್ಷಗಳ ಬಳಿಕ ಟೋಲ್ ಅಳವಡಿಸ ಹೊರಟಿರುವುದು ಮೂರ್ಖತನದ ಪರಮಾವದಿ. ಶಾಸಕನಾಗಿ ತನ್ನ ಇಚ್ಛಾಶಕ್ತಿಯನ್ನು ಬಳಸಿ ಟೋಲ್ ವಿರುದ್ಧ ಹೋರಾಟ ಮಾಡಿ ಯಾವುದೇ ಕಾರಣಕ್ಕೂ ನನ್ನ ಕ್ಷೇತ್ರದ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.
ಬೆಳ್ಮಣ್ ಸಂತ ಜೋಸೆಫರ ಚರ್ಚ್ನ ಪ್ರಧಾನ ಧರ್ಮಗುರು ರೆ.ಫಾ.ಎಡ್ವಿನ್ ಡಿಸೋಜಾ ಮಾತನಾಡಿ, ಒಗ್ಗಟ್ಟಿನಿಂದ ಕೂಡಿದ ಈ ಹೋರಾಟಕ್ಕೆ ನ್ಯಾಯ ಸಿಗಲಿದೆ. ಸರ್ವರನ್ನು ಒಗ್ಗೂಡಿಸಿಕೊಂಡು ಹೋರಾಟ ನಡೆಸುವ ಈ ಹೋರಾಟಕ್ಕೆ ಖಂಡಿತಾ ಯಶಸ್ಸು ದೊರಕುತ್ತದೆ ಎಂದರು.
ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಎಚ್ ಗೋಪಾಲ ಭಂಡಾರಿ, ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರಿ ದೇಗುಲದ ಆಡಳಿತ ಮೊಕ್ತೇಸರ ವಿಘ್ನೇಶ್ ಭಟ್, ಸುರೇಶ್ ಶೆಟ್ಟಿ ಗುರ್ಮೆ, ಮಟ್ಟಾರು ರತ್ನಾಕರ ಹೆಗ್ಡೆ, ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಜೀವಂಧರ ಆಧಿಕಾರಿ, ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕಲ್ಯಾದ ಉಮಾಮಹೇಶ್ವರ ಸ್ವಾಮೀಜಿ, ಬಸ್ಸು ಮಾಲಕರ ಸಂಘದ ಉಪಾಧ್ಯಕ್ಷ ಕಿನ್ನಿಗೋಳಿ ದುರ್ಗಾಪ್ರಸಾದ ಹೆಗ್ಡೆ, ಮುನಿಯಾಲು ಉದಯ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಪಲಿಮಾರು ಚರ್ಚ್ನ ಧರ್ಮಗುರುಗಳು, ಮಣಿರಾಜ ಶೆಟ್ಟಿ, ಶೀಲಾ ಕೆ.ಶೆಟ್ಟಿ, ಕಾರ್ಕಳ ಲಾರಿ ಮಾಲಕರ ಸಂಘದ ಅಧ್ಯಕ್ಷ ಉದಯ ಕುಮಾರ್, ಉದಯ ಎಸ್.ಕೋಟ್ಯಾನ್ ಮತ್ತಿತರರು ಜಾತಿ, ಮತ, ಪಕ್ಷ ಬೇಧ ಮರೆತು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.