ಬೆಂಗಳೂರು,ಅ 7 (MSP): ಅಕ್ಟೋಬರ್ ತಿಂಗಳ ಎರಡನೇ ಶನಿವಾರದ ರಜೆಯನ್ನು ರದ್ದುಗೊಳಿಸಿ ಅದನ್ನು ಮೂರನೇ ಶನಿವಾರ ನೀಡಲು ಸಿಎಂ ಕುಮಾರಸ್ವಾಮಿಯವರು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ. ಈ ತಿಂಗಳಲ್ಲಿ ಹೆಚ್ಚು ರಜೆ ಇದ್ದು,ಭಾನುವಾರ, ಎರಡನೇ ಶನಿವಾರ , ಗಾಂಧಿಜಯಂತಿ, ಮಹಾಲಯ ಅಮವಾಸೆಯ, ವಾಲ್ಮೀಕಿ ಜಯಂತಿಯ ಜತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿಯ ರಜೆಗಳು ಸೇರಿವೆ.
ಅಕ್ಟೋಬರ್ 18 ಮತ್ತು 19 ರಂದು ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬ ಬರಲಿದ್ದು, ಅಕ್ಟೋಬರ್ 21 ರಂದು ಭಾನುವಾರ ಬರಲಿದೆ. ಅಕ್ಟೋಬರ್ 20 ಶನಿವಾರ ದಂದು ರಜೆ ಮಾಡಿದರೆ, ಒಟ್ಟಾಗಿ ನಾಲ್ಕು ದಿನಗಳ ರಜೆ ಸಿಗುವುದೆಂದು, ಅಧಿಕ ಮಂದಿ ರಜೆ ತೆಗೆದುಕೊಳ್ಳುವ ಸಾಧ್ಯತೆಗಳಿರುತ್ತದೆ. ಹೀಗಾಗಿ ಅಕ್ಟೋಬರ್ 13ರ ಎರಡನೇ ಶನಿವಾರದ ರಜೆಯನ್ನು ರದ್ದುಪಡಿಸಿ, ಅಕ್ಟೋಬರ್ 20 ರಂದೇ ರಜೆ ನೀಡಿದರೆ ಹೆಚ್ಚು ಅನುಕೂಲ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿಯವರ ಸಲಹೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗಸ್ಥರ ಸಂಘ ಸ್ವಾಗತಿಸಿದ್ದು ಈ ತಿಂಗಳು ಎರಡನೇ ಶನಿವಾರದ ರಜೆಯ ಬದಲಿಗೆ ಮೂರನೇ ಶನಿವಾರ ರಜೆ ನೀಡಲು ಸರ್ಕಾರ ನಿರ್ಧರಿಸಿದರೆ ನಮ್ಮ ಸಹಕಾರ ಖಂಡಿತಾ ಇದೆ. ಆಡಳಿತಾತ್ಮಕವಾಗಿ ಹಾಗೂ ಸಾರ್ವಜನಿಕವಾಗಿ ಇದು ಒಳ್ಳೆಯ ಕ್ರಮ ಎಂದಿದೆ.