ಚಿತ್ರದುರ್ಗ,ಅ 7 (MSP): ಬರಗಾಲ ಪೀಡಿತ ಚಿತ್ರದುರ್ಗದಲ್ಲಿರುವ ತಾಲೂಕಿನ ಜಮೀನೊಂದರ ಭೂಮಿಯ ಕೆಳಭಾಗದಿಂದ ಅಗ್ನಿ ಜ್ವಾಲೆ ಕಾಣಿಸಿಕೊಂಡು ಜ್ವಾಲಾಮುಖಿಯ ಆತಂಕ ಸೃಷ್ಟಿಸಿಯಾಗಿದೆ. ಇಲ್ಲಿನ ನಾಯಕನಹಟ್ಟಿಯ ಮನಮೈನಹಟ್ಟಿ ಗ್ರಾಮದ ತಿಪ್ಪೇಸ್ವಾಮಿ ಎಂಬವರಿಗೆ ಸೇರಿದ ಜಮೀನಿನಲ್ಲಿ ಕಳೆದ ಅ. 2ರ ಮಂಗಳವಾರ ಸಂಜೆ 4 ಗಂಟೆಯ ವೇಳೆಗೆ ಭೂಮಿಯ ಒಳಭಾಗದಿಂದ ಬೆಂಕಿ ಹೊರ ಚಿಮ್ಮಿದೆ. ಜತೆಗೆ ಜ್ಬಾಲಾಮುಖಿಯಲ್ಲಿ ಕಂಡುಬರುವಂತೆ ಸ್ವಲ್ಪ ಪ್ರಮಾಣದಲ್ಲಿ ಲಾವಾರಸದಂತೆ ಹರಿದು ಬಂದಿದೆ. ಬೆಂಕಿ ಉಗುಳಿದ ಭಾಗದಲ್ಲಿಯೇ ವಿದ್ಯುತ್ ಕಂಬವಿದ್ದು ಬೆಂಕಿಯ ಕಾವಿಗೆ ಕಂಬವೂ ಕರಗಿ ಬೆಂಡಾಗಿತ್ತು. ವಿಷಯ ತಿಳಿದು ಬೆಸ್ಕಾಂ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದು ಕಂಬ ಬದಲಿಸಿದ್ದಾರೆ.
ಜಮೀನಿನ ಮಾಲೀಕ ತಿಪ್ಪೇಸ್ವಾಮಿ ನೀಡಿದ ಮಾಹಿತಿಯಂತೆ ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ, ಜ್ವಾಲೆಯಿಂದ ಕರಗಿದ ವಿದ್ಯುತ್ ಕಂಬದ ತುಂಡನ್ನು ಭೂಗರ್ಭ ಇಲಾಖೆ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು. ವರದಿ ಬರಬೇಕಷ್ಟೇ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಊರಿನ ಕೆಲವರ ಪ್ರಕಾರ ಭೂಮಿಯಡಿಯಲ್ಲಿ ಈ ರೀತಿ ಭಾರಿ ಬೆಂಕಿ ಕಾಣಿಸಿಕೊಳ್ಳಲು 11 ಕೆವಿ ವಿದ್ಯುತ್ ಲೈನ್ ಸಮಸ್ಯೆ ಕಾರಣ ಎಂದಿದ್ದಾರೆ. ವಿದ್ಯುತ್ ಕಂಬದ ಮೂಲಕ ಅರ್ತಿಂಗ್ ಬಂದು ಕಂಬದಲ್ಲಿದ್ದ ಕಬ್ಬಿಣ ಕೆಂಪಗಾಗಿ ಬೆಂಕಿಯಾಗಿ ಕರಗಿ ಬಂದಿದೆ ಎಂದು ಆರೋಪಿಸುತ್ತಿದ್ದಾರೆ.