ಮಂಗಳೂರು, ಅ 7 (MSP): ಕಂಬಳ ಕ್ರೀಡೆಯ ವಿರುದ್ದ , ಪೇಟಾದವರು ಸಲ್ಲಿಸಿರುವ ಅರ್ಜಿ ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬರಲಿರುವ ಹಿನ್ನಲೆಯಲ್ಲಿ ಕೇಂದ್ರ ಅಂಕಿ ಅಂಶಗಳ ಸಚಿವ ಡಿ.ವಿ ಸದಾನಂದ ಗೌಡ , ಜಿಲ್ಲಾ ಕಂಬಳ ಸಮಿತಿಯ ಪದಾಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಆ ಬಳಿಕ ನಗರದಲ್ಲಿ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪೇಟಾದವರು ಕಂಬಳ ಕ್ರೀಡೆಯ ವಿರುದ್ದ ಸುಪ್ರೀಂ ಕೋರ್ಟ್ ನಲ್ಲಿ ಹೊಸದಾಗಿ ಸಲ್ಲಿಸಿರುವ ಅರ್ಜಿಯ ವಿರುದ್ದ ಸಮರ್ಥ ಕಾನೂನು ಹೋರಾಟ ನಡೆಸಲು ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರಾವಳಿಯ ಶ್ರಮ ಸಂಸ್ಕೃತಿಯ ಪ್ರತೀಕವಾಗಿರುವ ಕಂಬಳ ಕ್ರೀಡೆಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಚಾರಣೆಯ ಕುರಿತು ಈಗಾಗಲೇ ಅಟಾರ್ನಿ ಜನರಲ್ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಕಂಬಳ ಉಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮತ್ತೊಮ್ಮೆ ಅವರೊಂದಿಗೆ ಚರ್ಚಿಸುತ್ತೇನೆ. ಇದಲ್ಲದೆ ಸಿಎಂ ಕುಮಾರಸ್ವಾಮಿ ಹಾಗೂ ರಾಜ್ಯ ಅಡ್ವೊಕೇಟ್ ಜನರಲ್ ಅವರೊಂದಿಗೂ ಮಾತನಾಡಿದ್ದೇನೆ. ಸುಪ್ರೀಂ ಕೋರ್ಟ್ ಕಂಬಳದ ಪರವಾಗಿ ತೀರ್ಪು ನೀಡುವ ವಿಶ್ವಾಸವಿದೆ ಎಂದು ಹೇಳಿದರು.
ಕಂಬಳ ಉಳಿಸಿಕೊಳ್ಳಲು ಪ್ರಬಲ ಹೋರಾಟ ಮಾಡಲಾಗುವುದು. ಒಂದೊಮ್ಮೆ ನ್ಯಾಯಾಲಯದಲ್ಲಿ ಕಂಬಳಕ್ಕೆ ಹಿನ್ನಡೆಯಾದರೂ ಕಾನೂನು ರಚಿಸಿಯಾದರೂ ಇದನ್ನು ಉಳಿಸ್ಕೊಳ್ಳಲು ಪ್ರಯತ್ನಿಸಲಾಗುವುದು. ಪೇಟಾದ ಅಭಿಪ್ರಾಯದಂತೆ ಕಂಬಳ ಓಟದ ಸಂದರ್ಭ ಬೆತ್ತ ಹಿಡಿಯುವುದು ಹಿಂಸಿಸಲೆಂದು. ಆದರೆ ಬಾರುಕೋಲು ಕೇವಲ ಸಾಂಕೇತಿಕ . ಪೇಟಾದವರು ದಕ್ಷಿಣ ಕನ್ನಡ ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಜನತೆಗೆ ಮಾನಸಿಕವಾಗಿ ಹಿಂಸೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು. ಕಂಬಳ ನಡೆಸಲು ರಾಜ್ಯ ಸರ್ಕಾರ ವಿಧಿಸಿರುವ ಷರತ್ತುಗಳಲ್ಲಿ ಕೆಲವು ನಿಯಮಗಳನ್ನು ತಿದ್ದುಪಡಿ ಮಾಡುವ ಅವಶ್ಯಕತೆ ಇದೆ. 33 ಸೆಲ್ಸಿಯಸ್ ಉಷ್ಣಾಂಶದಲ್ಲಿ ಕಂಬಳ ನಡೆಸುವಂತಿಲ್ಲ ಎಂದು ಹೇಳಲಾಗಿದೆ. ಆದರೆ, ಕರಾವಳಿ ಭಾಗದಲ್ಲಿ ಇಷ್ಟು ಉಷ್ಣಾಂಶ ಸಾಮಾನ್ಯ . ಹೀಗಾಗಿ ತಿದ್ದುಪಡಿ ಅವಶ್ಯಕ ಎಂದರು.