ಬಂಟ್ವಾಳ, ಅ 7 (MSP): ರಾಂಗ್ ಸೈಡ್ ನಲ್ಲಿ ಬಂದ ಕೆಎಸಾರ್ಟಿಸಿ ಬಸ್ಸೊಂದು ಬೈಕ್ ಗೆ ಢಿಕ್ಕಿಹೊಡೆದು ಸವಾರರಿಬ್ಬರು ಸಾವನಪ್ಪಿದ ದಾರುಣ ಘಟನೆ ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ಅ.7 ರ ಭಾನುವಾರ ಬೆಳಗ್ಗೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಮಂಗಳೂರು ಕುಡುಪು ನಿವಾಸಿ ಚರಣ್ ( 18) ಮತ್ತು ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ದಂಡೆಗೋಳಿ ನಿವಾಸಿ ಮಹಮದ್ ನೌಶಾದ್ (18) ಎಂದು ಗುರುತಿಸಲಾಗಿದೆ. ಬೈಕ್ ಸವಾರರಿಬ್ಬರು ಬಿ.ಸಿರೋಡಿನಿಂದ ಇತಿಹಾಸ ಪ್ರಸಿದ್ಧ ದೇವಸ್ಥಾನ ಕಾರಿಂಜ ದೇವಸ್ಥಾನ ದ ಕಡೆ ತೆರಳುತ್ತಿದ್ದ ವೇಳೆ ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ಕೆಎಸಾರ್ಟಿಸಿ ಬಸ್ ರಾಂಗ್ ಸೈಡ್ ಗೆ ಬಂದು ಬೈಕ್ ಸವಾರರಿಗೆ ಢಿಕ್ಕಿ ಹೊಡೆದಿದೆ. ಬಸ್ ಡಿಕ್ಕಿಯ ರಭಸಕ್ಕೆ ಬೈಕ್ ಸವಾರರು ಬಸ್ ನ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಸ್ಥಳೀಯ ನಿವಾಸಿಗಳು ಹರಸಾಹಸ ಪಟ್ಟು ಬಸ್ ನಡಿಯಲ್ಲಿ ಸಿಲುಕಿ ಕೊಂಡು ಚಿಂತಾಜನಕ ಸ್ಥಿತಿಯಲ್ಲಿ ನರಳಾಡುತ್ತಿದ್ದ ಸವಾರರನ್ನು 108 ಅಂಬ್ಯುಲೆನ್ಸ ಮೂಲಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಯಿಸಲಾಯಿತಾದರೂ ಗಂಭೀರ ಸ್ವರೂಪದ ಗಾಯಗೊಂಡ ಇವರು ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ. ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.