ಸುಳ್ಯ, ಅ 7 (MSP): ಹೊಡೆದಾಟ ಪ್ರಕರಣದ ವಿಚಾರಣೆಗೆ ಕೋರ್ಟಿಗೆ ಹಾಜರಾಗಬೇಕಿದ್ದ ಅಣ್ಣನ ಬದಲು ತಾನೇ ಆತನೆಂದು ಹೇಳಿ ಹಾಜರಾದ ತಮ್ಮ ನನ್ನು ಪತ್ತೆ ಹಚ್ಚಿದ ನ್ಯಾಯಾಧೀಶರು ಆತನನ್ನು ಪೊಲೀಸರ ವಶಕ್ಕೆ ನೀಡಿದ ಘಟನೆ ಸುಳ್ಯ ನ್ಯಾಯಾಲಯದಲ್ಲಿ ನಡೆದಿದೆ. ಸವಣೂರು ನಿವಾಸಿ ಶರೀಫ್ ಪೊಲೀಸ್ ವಶಕ್ಕೆ ಹೋದ ವ್ಯಕ್ತಿ. ಆರೋಪಿ ಸಿದ್ದಿಕ್ ಬದಲಾಗಿ ಆತನ ಸಹೋದರ ಶರೀಫ್ ಹಾಜರಾಗಿ ನ್ಯಾಯಾಲಯಕ್ಕೆ ವಂಚಿಸಲು ಯತ್ನಿಸಿದ್ದ. ಈಗ ಶರೀಫ್ ಸಹಿತ ಎಲ್ಲಾ ಆರೋಪಿಗಳು ಜೈಲು ಪಾಲಾಗಿದ್ದಾರೆ.
ಘಟನೆ ವಿವರ:
2017ರ ಜೂನ್ 11ರಂದು ಬೆಳ್ಳಾರೆ ಠಾಣೆ ವ್ಯಾಪ್ತಿಯ ಸವಣೂರು ಶಾಂತಿನಗರ ಸಮೀಪ ನಡೆದ ಹೊಡೆದಾಟ ಪ್ರಕರಣದ ಆರೋಪಿಗಳ ವಿಚಾರಣೆ ಸುಳ್ಯ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಆರೋಪಿಗಳಾದ ಸಿದ್ದಿಕ್, ಆರೀಸ್ ಎಂ, ನವಾಜ್ ಎಂ ವಿಚಾರಣೆಗೆ ಹಾಜರಾಗಬೇಕಿತ್ತು. ಇದರಲ್ಲಿ ಸಿದ್ದಿಕ್ ಆರು ತಿಂಗಳ ಹಿಂದೆಯೇ ವಿದೇಶಕ್ಕೆ ತೆರಳಿದ್ದಾನೆ. ವಿಚಾರಣೆ ಸಂದರ್ಭದಲ್ಲಿ ಸಿದ್ಧಿಕ್ ಬದಲಾಗಿ ಸಹೋದರ ಶರೀಫ್ ಹಾಜರಾಗಿ ವಂಚಿಸುತ್ತಿದ್ದ. ಅ.6 ರ ಶನಿವಾರ ಈ ಪ್ರಕರಣ ವಿಚಾರಣೆಗೆ ಬಂದಿದ್ದು, ಪ್ರಕರಣದ ಆರೋಪಿ ಮುಂಡ್ಯತ್ತಡ್ಕ ಸಿದ್ದಿಕ್ ನ್ಯಾಯಾಲಯಕ್ಕೆ ಬರಬೇಕಿತ್ತು. ಆದರೆ ಬಂದದ್ದು ಅವರ ತಮ್ಮ ಶರೀಫ್ ಹಾಗೂ ಇತರ ಆರೋಪಿಗಳು ಹಾಜರಾಗಿದ್ದರು.
ಆದರೆ ವಿಚಾರಣೆ ಸಂದರ್ಭ ಈ ಬಗ್ಗೆ ನ್ಯಾಯಾಧೀಶರಿಗೆ ಸಂಶಯ ಬಂದಿತ್ತು. ಹೀಗಾಗಿ ಶರೀಫ್ ಅವರಿಗೆ ಸಿದ್ದಿಕ್ ನೀನೇನಾ ಎಂದು ಪ್ರಶ್ನಿಸಿದರು. ಶರೀಫ್ ಹೌದು ಎಂದು ಎಂದಿದ್ದ. ಆತನ ಚಹರೆ ಬಗ್ಗೆ ಇತರ ಆರೋಪಿಗಳಲ್ಲಿ ಪ್ರಶ್ನಿಸಿದಾಗ ಅವರೂ ಕೂಡಾ ಈತನೇ ಸಿದ್ದಿಕ್ ಎಂದು ವಾದಿಸಿದ್ದರು.
ಸಂಜೆ 3 ಗಂಟೆಗೆ ವಿಚಾರಣೆ ಮುಂದೂಡಿದ ನ್ಯಾಯಾಧೀಶರು ಅಷ್ಟರೊಳಗೆ ಈತ ಸಿದ್ಧಿಕ್ ಎನ್ನುವುದಕ್ಕೆ ಗುರುತು ಪತ್ರ ತಂದೊಪ್ಪಿಸಲೇಬೇಕು ಎಂದು ಸೂಚಿಸಿ ಪೊಲೀಸರ ವಶಕ್ಕೆ ಒಪ್ಪಿಸಿದರು. ಬಳಿಕ ಶರೀಪ್ ತಂದೆ ಹಾಗೂ ಸಹೋದರ ನ್ಯಾಯಾಲಯಕ್ಕೆ ಹಾಜರಾಗಿ ಗುರುತು ಪತ್ರ ನೀಡಿ ಈತ ಸಿದ್ದಿಕ್ ಎಂದೇ ವಾದಿಸಿದ್ದರು. ಆದರೆ ನ್ಯಾಯಾಲಯದಲ್ಲಿ ದಾಖಲಿಸಿದ್ದ ಮಾಹಿತಿ ಹಾಗೂ ಆತನ ಪರವಾಗಿ ತಂದಿದ್ದ ಗುರುತು ಪತ್ರ ಪರಿಶೀಲಿಸಿದಾಗ ನಿಜ ತಿಳಿಯಿತು.
ನ್ಯಾಯಾಧೀಶರ ಸೂಚನೆ ಮೇರೆಗೆ ಶಿರಸ್ತೇದಾರರು ಶರೀಫ್ ಮತ್ತು ಇತರರು ನ್ಯಾಯಾಲಯಕ್ಕೆ ವಂಚನೆ ಎಸಗಿರುವ ಬಗ್ಗೆ ಸುಳ್ಯ ಠಾಣೆಗೆ ದೂರು ನೀಡಿದರು. ಎಸ್.ಐ ಮಂಜುನಾಥ್ ಅವರು ಶರೀಫ್ , ಆರೀಸ್ ಎಂ, ನವಾಜ್ ಎಂ, ಹಾಗೂ ದಾಖಲೆ ತಂದ ನಜೀರ್ ನನ್ನು ಬಂಧಿಸಿದ್ದಾರೆ. ಆರೀಪಿ ತಂದೆ ರಹಿಮಾನ್ ರನ್ನು ವಿಚಾರಣೆಗೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣದ ನೈಜ ಆರೋಪಿ, ಅಣ್ಣ ಸಿದ್ದಿಕ್ ವಿದೇಶಕ್ಕೆ ಹೋಗಿದ್ದು, ಈ ಹಿಂದೆ ನಡೆದ ಮೂರು ವಾಯಿದೆಗಳಲ್ಲಿಯೂ ಶರೀಫ್ ಹಾಜರಾಗಿದ್ದ ಎನ್ನಲಾಗಿದೆ.