ಮೈಸೂರು, ಅ 07(MSP): ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ಜಗದ್ವಿಖ್ಯಾತ ಪಡೆದಿದ್ದೇ ಪ್ರಪಂಚದ ಖ್ಯಾತ ವಿಖ್ಯಾತರ ಮೇಣದ ಪ್ರತಿಮೆಗಳಿಂದ. ಇದೇ ಮಾದರಿಯ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂವೊಂದು ಮೈಸೂರಿನಲ್ಲಿಯೂ ಪ್ರಾರಂಭವಾಗಲಿದೆ.
ಇಲ್ಲಿ ರಾಜ್ಯದ ಸೆಲೆಬ್ರಿಟಿಗಳ ಜತೆಗೆ ದೇಶದ ಸೆಲೆಬ್ರಿಟಿಗಳ ಮೇಣದ ಪ್ರತಿಮೆಗಳು ಇಲ್ಲಿರಲಿವೆ. ಅಂದಹಾಗೆ ಇದು ಶಿಲ್ಪಿ ಹಾಗೂ ಕಲಾವಿದ ಉಮೇಶ್ ಶೆಟ್ಟಿ ಅವರ ಕನಸಿನ ಕೂಸು. ಭಾನುವಾರ ಉದ್ಘಾಟನೆಗೊಳ್ಳಲಿರುವ ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ ನಲ್ಲಿ ಜಗತ್ತಿನ ಮಹಾನ್ ನಾಯಕರ, ನಟರ, ಕ್ರೀಡಾಪಟುಗಳ ಹಾಗೂ ಧಾರ್ಮಿಕ ಗುರುಗಳು ಸೇರಿದಂತೆ 50 ವ್ಯಕ್ತಿಗಳ ಮೇಣದ ಪ್ರತಿಮೆಗಳಿವೆ.
ಮೂಲತಃ ಹೊನ್ನಾವರದವರಾದ ಉಮೇಶ್ ಶೆಟ್ಟಿ ಕಲಾ ಶಿಕ್ಷಕರಾಗಿ ಮುಂಬೈ ಮತ್ತು ಪುಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ಮೇಣದ ಪ್ರತಿಮೆ ನಿರ್ಮಾಣದಲ್ಲಿ ತೊಡಗಿದ್ದಾರೆ. ಮ್ಯೂಸಿಯಂ ನಿರ್ಮಾಣಕ್ಕೆ ಪ್ರವಾಸಿ ಸ್ಥಳವಾದ ಮೈಸೂರು ಸೂಕ್ತ ಎಣಿಸಿ ಈ ಸ್ಥಳವನ್ನು ಆಯ್ಕೆ ಮಾಡಿದ್ದೇನೆ ಎನ್ನುತ್ತಾರೆ ಉಮೇಶ್ ಶೆಟ್ಟಿ. ಇದಕ್ಕಾಗಿ ಸತತ ಎರಡು ವರ್ಷಗಗಳಿಂದ ದುಡಿಯುತ್ತಿದ್ದೇನೆ. ನನ್ನ ತಂಡದಲ್ಲಿ 10-12 ಕಲಾವಿದರ ನಿರಂತರ ಶ್ರಮದ ಫಲವಾಗಿ ನನ್ನ ಕನಸು ನನಸಾಗುತ್ತಿದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ನಟರಾದ ಡಾ.ರಾಜ್ ಕುಮಾರ್, ಸರ್. ಎಂ.ವಿಶ್ವೇಶ್ವರಯ್ಯ, ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಸೇರಿದಂತೆ ಹಲವರ ಮೇಣದ ಉಮೇಶ್ ಶೆಟ್ಟಿ ಅವರ ಬಳಿ ಇದೆ.