ಬಳ್ಳಾರಿ, ಅ 06(SM): ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬರುವ ಸಂದರ್ಭ ಮೈತ್ರಿಕೂಟವನ್ನು ಉರುಳಿಸಲು ಶತಾಯಗತಾಯ ಪ್ರಯತ್ನಿಸಿದ್ದವರು ಬಿಜೆಪಿ ಶಾಸಕ ಶ್ರೀರಾಮುಲು. ಅಲ್ಲದೆ ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೇ ತೊಡೆತಟ್ಟಿ ನಿಂತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಹಾಗೂ ಶ್ರೀರಾಮುಲು ಹಾವು ಮುಂಗುಸಿಯಂತೆ ವೈರಿಗಳು.
ಆದರೆ, ಇದೀಗ ಶ್ರೀರಾಮುಲು ಸಹೋದರಿ ಕಾಂಗ್ರೆಸ್ ನಾಯಕನ ಕುಟುಂಬದೊಂದಿಗೆ ಬೀಗತನ ಮಾಡಿದ್ದಾರೆ. ಶಾಸಕ ಶ್ರೀರಾಮುಲುರ ಸಹೋದರಿ ಈ ಹಿಂದೆ ಸಂಸದೆಯಾಗಿದ್ದ ಜೆ.ಶಾಂತಾ ಅವರು, ಕಾಂಗ್ರೆಸ್ ನಾಯಕನ ಪುತ್ರನಿಗೆ ತಮ್ಮ ಪುತ್ರಿಯನ್ನು ನೀಡಿ ವಿವಾಹ ಮಾಡಿಕೊಳ್ಳಲು ನಿಶ್ಚಯ ಮಾಡಿದ್ದಾರೆ. ಮಾಜಿ ಸಂಸದೆ ಜೆ.ಶಾಂತಾರ ಏಕೈಕ ಪುತ್ರಿ ಪ್ರಸನ್ನ ಲಕ್ಷಿಯನ್ನು ಕಾಂಗ್ರೆಸ್ ನಾಯಕ, ಪಾಲಿಕೆಯ ಮಾಜಿ ಸದಸ್ಯ ಬಿ.ಸೀನಾ ರ ಪುತ್ರ ಪವನ್ ಜತೆಗೆ ವಿವಾಹ ಮಾಡಲು ಮುಂದಾಗಿದ್ದಾರೆ.
ತನ್ನ ಸಹೋದರಿಯ ಈ ನಿರ್ಧಾರದ ಬಗ್ಗೆ ಶಾಸಕ ಶ್ರೀರಾಮಲು ಇದುವರೆಗೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಆದರೆ, ಕಾಂಗ್ರೆಸಿಗರನ್ನು ಕಂಡಾಗ ಕಂಡಾಮಂಡಲರಾಗಿ ಗುಡುಗುತ್ತಿದ್ದ ಶ್ರೀರಾಮುಲು, ಈ ಹಿಂದೆ ಹಲವಾರು ಭಾಷಣಗಳಲ್ಲಿ ಕಾಂಗ್ರೆಸಿಗರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿಗಳನ್ನು ನಡೆಸುತ್ತಾ ಬಂದಿದ್ದಾರೆ. ಇದೀಗ ಕಾಂಗ್ರೆಸ್ ನಾಯಕರೊಂದಿಗೆ ತನ್ನ ಸಹೋದರಿ ಸಂಬಂಧವನ್ನು ಹುಡುಕಿದ್ದು, ಇದೀಗ ಅನಿವಾರ್ಯವಾಗಿ ಕಾಂಗ್ರೆಸ್ ನಾಯಕರನ್ನು ಶ್ರೀರಾಮುಲು ಮುಖಾಮುಖಿ ಎದುರಿಸಬೇಕಾಗಿದೆ.
ಕಾಂಗ್ರೆಸಿನ ಯಾವೊಬ್ಬರನ್ನು ಬಿಡದೆ ವಾಗ್ದಾಳಿ ನಡೆಸುತ್ತಿದ್ದ ಶ್ರೀರಾಮುಲು ಇದೀಗ ತನ್ನ ಕುಟುಂಬ ನಿರ್ಧರವನ್ನು ಸ್ವಾಗತಿಸುತ್ತಾರಾ? ಅಥವಾ ಈ ಸಂಬಂಧದ ವಿರುದ್ಧ ನಿಲ್ಲುತ್ತಾರಾ? ಅನ್ನೋದೇ ಸದ್ಯದ ಕುತೂಹಲ.