ಕುಂದಾಪುರ, ಅ 06(SM): ವಿಚಾರಣಾಧೀನ ಕೈದಿಯೊಬ್ಬ ಪೊಲೀಸ್ ಠಾಣೆಯಿಂದ ಪರಾರಿಯಾಗಿರುವ ಘಟನೆ ಬೈಂದೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಬೈಂದೂರು ತಾಲೂಕು ವ್ಯಾಪ್ತಿಯ ಅರೆಶಿರೂರು ಗೋಳಿಹೊಳೆಯ ನಿವಾಸಿ ಸುರೇಶ್ ನಾಯ್ಕ(26) ಪರಾರಿಯಾದ ವಿಚಾರಣಾಧೀನ ಕೈದಿ.
ಸುರೇಶ್ ನಾಯ್ಕ ಪೋಕ್ಸೊ ಕಾಯ್ದೆಯಡಿ ಬಂಧಿತವಾಗಿ ಕಾರವಾರ ಜೈಲಿನಲ್ಲಿದ್ದ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ಕಾರವಾರ ಜೈಲಿಗೆ ಹಸ್ತಾಂತರಿಸಲಾಗಿತ್ತು.
ವಿಚಾರಣೆ ಹಿನ್ನೆಲೆಯಲ್ಲಿ ಕುಂದಾಪುರ ಮಾನ್ಯ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಿ ಪೊಲೀಸರು ಮತ್ತೆ ಕಾರವಾರಕ್ಕೆ ಕರೆದೊಯ್ಯುತ್ತಿದ್ದರು.
ಕುಂದಾಪುರದಿಂದ ಮತ್ಸಗಂಧ ಎಕ್ಸ್ ಪ್ರೆಸ್ ರೈಲಿನ ಮೂಲಕ ಪೊಲೀಸರು ಆರೋಪಿಯನ್ನು ಕಾರವಾರ ಕಾರಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭ ಮಾರ್ಗ ಮಧ್ಯೆ ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಬೆಂಗಾವಲು ಪೊಲೀಸ್ ಸಿಬ್ಬಂದಿಯವರಿಂದ ತಪ್ಪಿಸಿಕೊಂಡು ಸುರೇಶ್ ನಾಯ್ಕ ಪರರಾರಿಯಾಗಿದ್ದಾನೆ.
ಇದೀಗ ಪರಾರಿಯಾದ ವಿಚಾರಣಾಧೀನ ಕೈದಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ.