ನವದೆಹಲಿ, ಅ 06(SM): ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗ ಶನಿವಾರ ದಿನಾಂಕ ಘೋಷಣೆ ಮಾಡಿದೆ. ಛತ್ತೀಸ್ ಗಢದಲ್ಲಿ 2 ಹಂತದಲ್ಲಿ ಹಾಗೂ ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಆಯುಕ್ತರು ಘೋಷಣೆ ಮಾಡಿದ್ದಾರೆ.
ಛತ್ತೀಸ್ ಗಢದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೊದಲ ಹಂತದಲ್ಲಿ 18 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 12ರ ಸೋಮವಾರದಂದು ಮತದಾನ ನಡೆಯಲಿದೆ. ಉಳಿದಂತೆ ಛತ್ತೀಸ್ ಗಢದಲ್ಲಿ ಎರಡನೇ ಹಂತದ ಚುನಾವಣೆ ನವೆಂಬರ್ 20ರ ಮಂಗಳವಾರದಂದು ನಡೆಯಲಿದೆ.
ಮಧ್ಯಪ್ರದೇಶ ಮತ್ತು ಮಿಜೋರಾಂಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 28 ರಂದು ಈ ರಾಜ್ಯಗಳಲ್ಲಿ ಮತದಾನ ನಡೆಯಲಿದೆ. ಇನ್ನು ರಾಜಸ್ಥಾನ ಮತ್ತು ತೆಲಂಗಾಣಗಳಲ್ಲಿ ಒಂದೇ ಹಂತದ ಮತದಾನ ನಡೆಯಲಿದ್ದು ಡಿಸೆಂಬರ್ 7ರಂದು ಚುನಾವಣೆ ನಡೆಯಲಿದೆ. ಎಲ್ಲಾ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 11ರ ಮಂಗಳವಾರದಂದು ಹೊರಬೀಳಲಿದೆ.
ರಾಜಸ್ಥಾನದಲ್ಲಿ ಒಟ್ಟು 200 ವಿಧಾನಸಭಾ ಕ್ಷೇತ್ರಗಳಿದ್ದರೆ, ಮಧ್ಯಪ್ರದೇಶದಲ್ಲಿ 230, ಛತ್ತೀಸ್ ಗಢದಲ್ಲಿ 90 ಹಾಗೂ ಮಿಜೋರಾಂ ನಲ್ಲಿ 40 ವಿಧಾನಸಭಾ ಕ್ಷೇತ್ರಗಳಿವೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ಮಿಜೋರಾಂ ರಾಜ್ಯಗಳಲ್ಲಿ ವಿಧಾನಸಭೆಯ ಕಾಲಾವಧಿ ಡಿಸೆಂಬರ್ -ಜನವರಿಯಲ್ಲಿ ಅಂತ್ಯವಾಗಲಿದೆ. ಚುನಾವಣಾ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾನ, ಛತ್ತೀಸ್ ಗಢ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಗೊಳ್ಳಲಿದೆ.
ಇನ್ನು ಕರ್ನಾಟಕದ ರಾಮನಗರ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರ ಮತ್ತು ಮಂಡ್ಯ, ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಕರ್ನಾಟಕದಲ್ಲಿ ನಡೆಯಲಿರುವ ಮೂರು ಲೋಕಸಭಾ ಕ್ಷೇತ್ರಗಳ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದೆ.