ಕುಂದಾಪುರ, ಅ 06(SM): ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ಅತ್ತೆ ಮಗಳ ಮೇಲೆ ಅತ್ಯಾಚಾರ ಎಸಗಿ ಗಂಡು ಮಗುವಿನ ಜನನಕ್ಕೆ ಕಾರಣವಾಗಿದ್ದ ಆರೋಪಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಬೈಂದೂರು ನಿವಾಸಿ ಮಂಜುನಾಥ ಪ್ರಕರಣದ ಆರೋಪಿ.
2010 ಮಾರ್ಚ್ 10ರಂದು ಬೈಂದೂರು ತಾಲೂಕು ಕಾಲ್ತೋಡು ಗ್ರಾಮದಲ್ಲಿನ ತನ್ನ ನಿವಾಸದಲ್ಲಿ ಸಂತ್ರಸ್ತ ಯುವತಿಯೊಬ್ಬಳೇ ಇದ್ದ ಸಂದರ್ಭ ಆಕೆಯ ಮಾವನ ಮಗ ಮಂಜುನಾಥ ನಾಯ್ಕ್, ಯುವತಿಯನ್ನು ಬಲತ್ಕಾರ ಮಾಡಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಳಿಕ ವಿಚಾರವನ್ನು ಯಾರಿಗೂ ತಿಳಿಸದಂತೆ ಕೊಲೆ ಬೆದರಿಕೆ ಒಡ್ಡಿದ್ದಾನೆ. ಇದರಿಂದ ಗರ್ಭಿಣಿಯಾಗಿದ್ದ ಯುವತಿ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ್ದಳು.
ತನ್ನ ಮಾವನ ಮಗನ ಹೇಯ ಕೃತ್ಯದ ಬಗ್ಗೆ 2010ಸೆಪ್ಟಂಬರ್ ತಿಂಗಳಿನಲ್ಲಿ ಸಂತ್ರಸ್ತ ಯುವತಿ ಖಾಸಗಿ ದೂರು ದಾಖಲಿಸಿದ್ದಳು. ನ್ಯಾಯಾಲಯವು ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಬೈಂದೂರು ಠಾಣೆಗೆ ಆದೇಶ ನೀಡಿತ್ತು. ಅದರಂತೆ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಳಿಕ ಆತ ಜಾಮೀನು ಪಡೆದು ಹೊರಬಂದಿದ್ದ. ಸಂತ್ರಸ್ತ ಯುವತಿ ಅದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು.
ಅತ್ಯಾಚಾರ ಪ್ರಕರಣ ನ್ಯಾಯಾಲಯದಲ್ಲಿ ಸುದೀರ್ಘ ಎಂಟು ವರ್ಷಗಳ ಕಾಲ ವಿಚಾರಣೆ ನಡೆದಿತ್ತು. ಸಂತ್ರಸ್ತೆ ಸಹಿತ ಒಟ್ಟು 9 ಮಂದಿ ಆರೋಪಿ ಮಂಜುನಾಥ ವಿರುದ್ಧ ಸಾಕ್ಷ್ಯ ನುಡಿದಿದ್ದರು. ಸಂತ್ರಸ್ಥೆಯ ಪರ ವಕೀಲರಾದ ಪ್ರಕಾಶ್ಚಂದ್ರ ಶೆಟ್ಟಿ ಇದೇ ವರ್ಷ ಫೆಬ್ರವರಿ ತಿಂಗಳಿನಲ್ಲಿ ಡಿ.ಎನ್.ಎ. ಪರೀಕ್ಷೆಗೆ ಅವಕಾಶ ನೀಡುವಂತೆ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು ಈ ಪ್ರಕ್ರಿಯೆಗಳೆಲ್ಲಾ ಮುಗಿದು ಎಪ್ರಿಲ್ ತಿಂಗಳಿನಲ್ಲಿ ಡಿ.ಎನ್.ಎ ವರದಿ ಬಂದಿದ್ದು ಮಂಜುನಾಥನದ್ದೇ ಮಗು ಎಂದು ದೃಢಪಟ್ಟಿತ್ತು. ಇದೀಗ ನ್ಯಾಯಾಲಯವು ಮಂಜುನಾಥ ತಪ್ಪಿತಸ್ಥ ಎಂದು ತೀರ್ಪು ನೀಡಿದೆ.