ಮಂಗಳೂರು, ಅ 8: ಎಪ್ರಿಲ್ ನಂತರ ನಮ್ಮ ಶಿರಾಡಿ ಘಾಟಿ ರಸ್ತೆಯ ಬಗ್ಗೆ ಮಾತಾಡೋಹಾಗಿಲ್ಲ ಅಂತಿದ್ದಾರೆ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಲಯದ ಅಧಿಕಾರಿಗಳು . ಯಾಕೆ ಗೊತ್ತಾ ಹೊಂಡ ಗುಂಡಿಗಳಿಂದ ತುಂಬಿರೋ ರೋಡ್ ಮುಂದೆ ಚಮಕ್ ಆಗಿ ಹೊಳೆಯುತ್ತಂತೆ ಅಲ್ಲಿ ತನಕ ಸ್ವಲ್ಪ ಎಡ್ಜೆಸ್ಟ್ ಮಾಡ್ಕೋಳಿ ಅಂತಿದ್ದಾರೆ . ಯಾಕೆಂದರೆ ಶೀಘ್ರವೇ ನವೆಂಬರ್ ವೇಳೆಗೆ ಕಾಮಗಾರಿ ಆರಂಭಿಸಿ ಏಪ್ರಿಲ್ ನಂತರ ಸೂಪರ್ ಕಾಂಕ್ರೀಟ್ ರಸ್ತೆ ರೆಡಿ ಮಾಡ್ತೀವಿ ಅನ್ನುತ್ತಿದೆ ಇಲಾಖೆ. ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ, ಕೇಂದ್ರ ಭೂಸಾರಿಗೆ ಸಚಿವಾಲಯದಿಂದ ಆರ್ಥಿಕ ಅನುಮೋದನೆ ದೊರೆಯಬೇಕಿದ್ದು, ಮುಂದಿನ ವಾರ ಅನುಮೋದನೆ ಸಿಗಲಿದೆ ಆ ಬಳಿಕ ಸಕಲೇಶಪುರ ತಾಲೂಕಿನ ಕೆಂಪುಹೊಳೆ ಸೇತುವೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡಹೊಳೆ ಸೇತುವೆ ತನಕ 12.38 ಕಿ.ಮೀ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಪಕ್ಕಾ ಎಂದಿದ್ದಾರೆ ಅಧಿಕಾರಿಗಳು.
ಮಳೆ ನೆಪವೊಡ್ಡಿ ಕಾಮಗಾರಿ ವಿಳಂಬ ಮಾಡಲ್ಲ, ಅದಕ್ಕಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಕೆಲಸ ಆರಂಭಿಸುವ ಮುನ್ನ ನಿರ್ಮಾಣಕ್ಕಾಗಿ ಬೇಕಾದ ಜಲ್ಲಿ ಕಲ್ಲು, ಕಬ್ಬಿಣ, ಸಿಮೆಂಟ್ ದಾಸ್ತಾನು ರೆಡಿಮಾಡಿಟ್ಟುಕೊಂಡು ಮಳೆ ಸಂಪೂರ್ಣ ನಿಂತ ಬಳಿಕ ನವೆಂಬರ್ ನಲ್ಲಿ ಕಾಂಕ್ರೀಟ್ ಕಾಮಗಾರಿ ಆರಂಭವಾಗಲಿದೆ ಎಂದು ಭರವಸೆಯನ್ನು ನೀಡಲು ಮರೆಯಲಿಲ್ಲ ಅಧಿಕಾರಿಗಳು .ಗುತ್ತಿಗೆದಾರರಿಗೆ ಕಾರ್ಯಆರಂಭಿಸಲು ಆದೇಶವನ್ನು ನೀಡಲಾಗಿದೆ. ಅಲ್ಲದೇ ಕಾಂಕ್ರೀಂಟ್ ರಸ್ತೆ ನಿರ್ಮಾಣ ನಡೆಯುವ ಸಂದರ್ಭದಲ್ಲಿ ಈ ರಸ್ತೆ ವಾಹನ ಸಂಚಾರ ಬಂದ್ ಎಂದಿದ್ದಾರೆ
ಶಿರಾಡಿ ಘಾಟಿಯಲ್ಲಿ ಪದೇ ಪದೇ ರಸ್ತೆ ಹಾಳಾಗುತ್ತಿರುವುದಕ್ಕಾಗಿ, ಶಾಶ್ವತ ಪರಿಹಾರಕ್ಕಾಗಿ 26 ಕಿ.ಮೀ.ನಲ್ಲೂ ಕಾಂಕ್ರೀಟ್ ರಸ್ತೆ ನಿರ್ಮಿಸಲು ಇಲಾಖೆ ಈ ಯೋಜನೆ ರೂಪಿಸಿದೆ . ಇದರಲ್ಲಿ 13.62 ಕಿ.ಮೀ. ರಸ್ತೆಗೆ 2015ರಲ್ಲೇ ಕಾಂಕ್ರೀಟ್ ಹಾಕಲಾಗಿದೆ. ಹಾಸನದಿಂದ ಬಿ.ಸಿ.ರೋಡ್ವರೆಗಿನ 140 ಕಿ.ಮೀ., ಹೆಗ್ಗದ್ದೆಯಿಂದ ಅಡ್ಡಹೊಳೆವರೆಗಿನ 26 ಕಿ.ಮೀ. ರಸ್ತೆ ಮಾತ್ರ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಉಳಿದಿದೆ. ಉಳಿದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿದೆ ಎಂದು ವಿವರಿಸಿದ್ರು.