ಕುಂದಾಪುರ, ಅ 6(SM): ಸರಕಾರಿ ಪ್ರೌಢ ಶಾಲಾ ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕುಂದಾಪುರದ ನಾವುಂದದಲ್ಲಿ ನಡೆದಿದೆ. ಮೂಲತಃ ಅಂಕೋಲದವರಾಗಿರುವ ಪ್ರಸ್ತುತ ಉಪ್ಪುಂದ ಹೈಸ್ಕೂಲು ಶಿಕ್ಷಕಿ ಶಶಿಕಲಾ ನಾಯ್ಕ್ (45) ಎಂದು ಗುರುತಿಸಲಾಗಿದೆ.
ಶನಿವಾರ ಬೆಳಿಗ್ಗೆ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟವರು ನಾವುಂದ ಹೊಳೆಗೆ ಹಾರಿದ್ದಾರೆ. ಈ ಸಂದರ್ಭ ಸ್ಥಳೀಯರು ಗಮನಿಸಿದ್ದು, ತಕ್ಷಣ ಶಿಕ್ಷಕಿಯನ್ನು ಹೊಳೆಯಿಂದ ಮೇಲಕ್ಕೇತ್ತಿ ರಕ್ಷಿಸಿದ್ದಾರೆ. ಬಳಿಕ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಶಶಿಕಲಾ ಟೀಚರ್ ಪತಿ ನಾವುಂದ ಕಾಲೇಜಿನ ಪ್ರಭಾರ ಮುಖ್ಯೋಪಾದ್ಯಾಯ ಹಿನ್ನಪ್ಪ ನಾಯಕರ ಜೊತೆಗೆ ನಾವುಮದದಲ್ಲಿ ವಾಸವಿದ್ದರು. ಮಕ್ಕಳಿಬ್ಬರು ಹೊರಗಡೆ ವಿದ್ಯಾಭ್ಯಾಸಕ್ಕೆ ತೆರಳಿದ್ದರಿಂದ ಶಿಕ್ಷಕಿ ಶಶಿಕಲಾ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ಅವರು ಚಿಕಿತ್ಸೆ ಪಡೆಯುತ್ತಿದ್ದು, ಕಳೆದೆರಡು ದಿನಗಳಿಂದ ಔಷಧಿ ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.