ಸುಪ್ರೀತಾ ಸಾಲ್ಯಾನ್
ಈ ಪ್ರತಿಭೆಯ ಕಂಠಕ್ಕೆ ಕೇವಲ 18 ವರ್ಷ ಪ್ರಾಯ. ಇವರ ಕಂಠಸಿರಿಗೆ ಮಾರುಹೋಗದವರಿಲ್ಲ. ಎಲ್ಲರನ್ನು ಮಂತ್ರ ಮುಗ್ದರನ್ನಾಗಿಸುವ ಧ್ವನಿ ಇವರದು. ತನ್ನ ಸುಮಧುರ ಕಂಠದಿಂದ ಈ ಪ್ರತಿಭೆ ಹಾಡು ಹಾಡಿದರೆಂದರೆ ಕೇಳುಗರೆಲ್ಲರೂ ಒಮ್ಮೆ ನಿಶ್ಯಬ್ದರಾಗಿ ಬಿಡುತ್ತಾರೆ. ಅಂದ ಹಾಗೆ ತನ್ನ ಕಂಠಸಿರಿಯಿಂದ ಸಂಗೀತ ಪ್ರಿಯರನ್ನು ತನ್ನತ್ತ ಸೆಳೆದು ನಿಬ್ಬೆರಗಾಗುವಂತೆ ಮಾಡುವ ಈ ಪ್ರತಿಭೆಯ ಹೆಸರು ನಿಹಾಲ್ ಹ್ಯಾನ್ಸನ್ ತಾವ್ರೊ...
ಮಂಗಳೂರು ಹೊರವಲಯದ ಮೂಡುಬಿದಿರೆಯ ಹೆರಾಲ್ಡ್ ತಾವ್ರೊ ಮತ್ತು ಪ್ರೆಸಿಲ್ಲಾ ತಾವ್ರೊ ದಂಪತಿಗಳ ಮಗನಾಗಿ ಹುಟ್ಟಿದ ನಿಹಾಲ್ ತಾವ್ರೊ ಇವತ್ತು ಕರಾವಳಿ ಸೇರಿದಂತೆ ಕರ್ನಾಟಕದಾದ್ಯಂತ ಎಲ್ಲರಿಗೂ ಚಿರಪರಿಚಿತ. ಇದಕ್ಕೆ ಕಾರಣವಾಗಿರುವುದು ಈ ಪ್ರತಿಭೆಯ ಅದ್ಭುತ ಕಂಠಸಿರಿ. ಅಲಂಗಾರಿನ ಸೈಂಟ್ ಥೋಮಸ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದ ನಿಹಾಲ್ ತಾವ್ರೊ ಜೈನ್ ಜ್ಯೂನಿಯರ್ ಕಾಲೇಜು ಮೂಡುಬಿದಿರೆಯಲ್ಲಿ ಪದವಿ ಪೂರ್ವ ಶಿಕ್ಷಣ ಪೂರ್ತಿಗೊಳಿಸಿದ್ದಾರೆ. ಮಹಾವೀರ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿರುವ ಈ ಪ್ರತಿಭೆ ಸದ್ಯ ಝೀ ಕನ್ನಡ ವಾಹಿನಿಯ ಮಾಸ್ಟರ್ ಪೀಸ್ ಕಾರ್ಯಕ್ರಮವಾದ ಸರಿಗಮಪ ಸೀಸನ್ - 15 ರಿಯಾಲಿಟಿ ಶೋನಲ್ಲಿ ವಿಶಿಷ್ಟ ಕಂಠದ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ.
ಬಿಗ್ ರಿಯಾಲಿಟಿ ಶೋ ಸರಿಗಮಪ ಸೀಸನ್15 ಕಾರ್ಯಕ್ರಮದಲ್ಲಿ ನಿಹಾಲ್ ತಾವ್ರೊ ಆಡಿಷನ್ನಲ್ಲಿ ಅದ್ಬುತವಾಗಿ ಹಾಡಿ ತೀರ್ಪುಗಾರರ ಗಮನ ಸೆಳೆದಿದ್ದಾರೆ. ತನ್ನದೆ ಶೈಲಿಯಲ್ಲಿ ವಿಶಿಷ್ಟ ರೀತಿಯಲ್ಲಿ ಹಾಡು ಹಾಡಿ ಎಲ್ಲರ ಮೆಚ್ಚುಗೆಗ ಪಾತ್ರರಾಗಿದ್ದಾರೆ.ಇಡೀ ಸರಿಗಮಪ ಸಭಾಂಗಣವೇ ಕರಾವಳಿಯ ಈ ಪ್ರತಿಭೆಯ ಕಂಠಕ್ಕೆ ತಲೆದೂಗಿದೆ.
ನಿಹಾಲ್ ತಾವ್ರೊ ಅವರ ಕಂಠಸಿರಿ ಹಾಗೂ ಭಾವಪೂರ್ಣಗಾಯನ ಶೈಲಿಗೆ ಸ್ಫೂರ್ತಿ ತಂದೆ ಹೆರಾಲ್ಡ್ ತಾವ್ರೊ. ಈ ಪ್ರತಿಭೆಗೆ ಹಾಡುಗಾರಿಕೆ ತಾನೇ ತಾನಾಗಿ ಒಲಿದು ಬಂದ ಆಸ್ತಿ. ಯಾರ ಗರಡಿಯಲ್ಲೂ ನಿಹಾಲ್ ತಾವ್ರೊ ಸಂಗೀತವನ್ನು ಅಭ್ಯಾಸ ನಡೆಸಿಲ್ಲ. ಮೂಡುಬಿದಿರೆಯ ಅಲಂಗಾರ್ ಚರ್ಚಿನಲ್ಲಿ ತಂದೆ ಕೋಯರ್ ಮಾಸ್ಟರ್ ಆಗಿದ್ದರು. ಅನೇಕ ಕೊಂಕಣಿ ಹಾಡುಗಳಿಗೆ ಹೆರಾಲ್ಡ್ ತಾವ್ರೊ ರಾಗ ಸಂಯೋಜನೆ ಸೇರಿದಂತೆ ಸಾಹಿತ್ಯ ಬರೆದಿದ್ದರು. ಸಂಗೀತ ಕ್ಷೇತ್ರದಲ್ಲಿ ತಂದೆ ಇಟ್ಟಿರುವ ಆಸಕ್ತಿಯೇ ನಿಹಾಲ್ ತಾವ್ರೊ ಅವರಿಗೆ ಬಳುವಳಿಯಾಗಿ ದೊರೆಯಿತು.
ಸುಮಾರು 4 ನೇ ವಯಸ್ಸಿನಲ್ಲಿ ಸಂಗೀತ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ನಿಹಾಲ್ ತಾವ್ರೋ ಮತ್ತೆಂದು ಹಿಂತಿರುಗಿ ನೋಡಿರಲಿಲ್ಲ. ತಂದೆಯನ್ನೇ ಸ್ಫೂರ್ತಿಯನ್ನಾಗಿರಿಸಿಕೊಂಡು ಮುಂದೆ ಸಾಗಿದ ನಿಹಾಲ್ ಇವತ್ತು ಪ್ರತಿಭಾನ್ವಿತ ಸಂಗೀತಗಾರ. ಶಾಲಾ-ಕಾಲೇಜು ದಿನಗಳು ಸೇರಿದಂತೆ ಹಾಡು ಹಾಡಲು ಯಾವುದೇ ವೇದಿಕೆಗೆ ಈ ಪ್ರತಿಭೆ ಹತ್ತಿದರೆಂದರೆ ಇವರಿಗೇ ಮೊದಲ ಬಹುಮಾನ. ಈ ಪ್ರತಿಭೆಯ ವಿಶೇಷ ಮಾಧುರ್ಯ, ಕಂಚಿನ ಕಂಠದ ದನಿಗೆ ತಲೆದೂಗದೇ ಯಾರೂ ಇರಲಾರರು. ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅನೇಕ ಬಾರಿ ಈ ಪ್ರತಿಭೆಗೆ ಪ್ರಶಸ್ತಿಗಳು ಲಭಿಸಿದೆ.
2014ರಲ್ಲಿ ಮಂಗಳೂರಿನಲ್ಲಿ ನಡೆದ ಫಾರಂ ಫಿಝ್ಝಾ ಮಾಲ್ ಸೂಪರ್ ಸಿಂಗರ್ಸ್ ರಿಯಾಲಿಟಿ ಶೋನಲ್ಲಿ ಫಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮಿರುವ ನಿಹಾಲ್, 2015ರ ವಾಯ್ಸ್ ಆಫ್ ಉಡುಪಿ ರಿಯಾಲಿಟಿ ಶೋನಲ್ಲಿ ಮೊದಲ ಸ್ಥಾನ ಮುಡಿಗೇರಿಸಿಕೊಂಡಿದ್ದಾರೆ. ಮಾತ್ರವಲ್ಲ, ಕರಾವಳಿ ಸ್ಥಳೀಯ ವಾಹಿನಿ ನಡೆಸಿದ ನಮ್ಮ ಸೂಪರ್ ಸಿಂಗರ್ಸ್ ಶೋನಲ್ಲಿ ಮೂರನೇ ಸ್ಥಾನ ಪಡೆದುಕೊಂಡು ಎಲ್ಲರಿಂದ ಭೇಷ್ ಅನಿಸಿಕೊಂಡಿದ್ದಾರೆ.
ಜೊತೆಗೆ 2017ರಲ್ಲಿ ಕರಾವಳಿಯ ಪ್ರಸಿದ್ಧ ಸುದ್ದಿ ವಾಹಿನಿ ದಾಯ್ಜಿವರ್ಲ್ಡ್ ನಡೆಸಿದ ಸ್ಟೂಡಿಯೋ ವಾಯ್ಸ್ ಎಂಬ ರಿಯಾಲಿಟಿ ಶೋನಲ್ಲಿ ನೂರಾರು ಸ್ಪರ್ಧಿಗಳನ್ನು ಹಿಂದಿಕ್ಕಿ ಅದ್ಭುತವಾಗಿ ಹಾಡುವ ಮೂಲಕ ಗ್ರಾಂಡ್ ಫಿನಾಲೆ ಪ್ರವೇಶಿಸಿ ಚಾಂಪಿಯನ್ ಪಟ್ಟವನ್ನೇ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಸಂಗೀತ ಪ್ರಿಯರ ಮನಗೆಲ್ಲುವುದರೊಂದಿಗೆ ಕರಾವಳಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇಷ್ಟೇ ಅಲ್ಲದೇ ಕನ್ನಡ, ಹಿಂದಿ, ತುಳು, ಕೊಂಕಣಿ ಸೇರಿದಂತೆ ಬೇರೆ ಬೇರೆ ಭಾಷೆಯ ಸಾವಿರಾರು ಹಾಡುಗಳು ಇವರ ಕಂಠದಿಂದ ಹೊರಹೊಮ್ಮಿವೆ. ತುಳು ಸೇರಿದಂತೆ ಕೊಂಕಣಿಯ ಸಿನಿಮಾ ಹಾಡುಗಳಿಗೂ ಧ್ವನಿಯಾಗಿರುವ ನಿಹಾಲ್ ತಾವ್ರೊ ‘ತೊಟ್ಟಿಲ್’, ‘ನಮ್ಮ ಕುಸಾಲ್ದ ಜವನೆರ್’, ‘ಪ್ಲಾನಿಂಗ್ ದೆವಚೆಂ’ ಎಂಬ ಚಿತ್ರದ ಹಾಡುಗಳಿಗೆ ತಮ್ಮ ಕಂಠಸಿರಿ ನೀಡಿದ್ದಾರೆ. ಕೊಂಕಣಿ ಭಕ್ತಿಗೀತೆ ಸೇರಿದಂತೆ ಅನೇಕ ಕೊಂಕಣಿ ಧ್ವನಿ ಸುರುಳಿಗಳಲ್ಲಿ ಇವರ ಕಂಚಿನ ಕಂಠವಿದೆ.
ಸದ್ಯ ಗುರುಗಳಾದ ಯಶವಂತ್ ಅವರ ಗರಡಿಯಲ್ಲಿ ಸಂಗೀತ ಅಭ್ಯಾಸ ನಡೆಸುತ್ತಿರುವ ಕರಾವಳಿಯ ಪ್ರತಿಭೆ ನಿಹಾಲ್ ತಾವ್ರೊ ಜೀ ಕನ್ನಡ ವಾಹಿನಿಯ ಮೆಟ್ಟಿಲೇರಿದ್ದು ಸರಿಗಮಪ -15 ರಿಯಾಲಿಟಿ ಶೋನಲ್ಲಿ ಕಂಚಿನ ಕಂಠದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಝೀ ಕನ್ನಡ ವಾಹಿನಿಯ ಈ ಬಹುದೊಡ್ಡ ವೇದಿಕೆ ನಿಹಾಲ್ ತಾವ್ರೋ ಅವರ ಜೀವನದ ದಿಕ್ಕನ್ನು ಬದಲಾಯಿಸಲಿ, ಗೆದ್ದು ಬರಲಿ ಎಂದು ಶುಭ ಹಾರೈಸೋಣ....